Wednesday, December 21, 2011

ದಾವಣಗೆರೆಯಿಂದ...


ದಾವಣಗೆರೆಯ ಬ್ಲಾಗ್ ಮಿತ್ರ ಅಕ್ಕರೆಯಿಂದ ಕೊಟ್ಟ ಪ್ರಶಸ್ತಿ ಪತ್ರ:

"ನೆನಪುಗಳ ನೆನಪು ಸದಾ ನೆನಪಾಗಿರಲು"

ಅನನ್ಯ ಅದ್ವಿತೀಯ ಅದ್ಭುತಗಳ ಕಾರಣ
ನೀವು ಬಿಡುವ ಅಪರೂಪದ ಪದಗಳ ಬಾಣ
ಅಲ್ಲೊಂದು ಕಥೆ ಕವನ ಕಾಲ ಹರಣ
ಅಲ್ಲೊಮ್ಮೆ ನಿಮ್ಮ ಪರಿಚಯದ ಕ್ಷಣ

ಅಂಧ ದೀಪಾವಳಿಯ ಆ ಒಂದು ಕವನ
ಮೈಮರೆತು ಎಲ್ಲೋ ಹೋಯಿತು ಮನ
ಅದರ ನಂತರ ಓದುತ್ತಾ ಪ್ರತಿ ದಿನ
ಬಾನೆತ್ತರದ ಭಾವನೆಗಳ ನಿಮ್ಮ ಕವನ

ಮತ್ತೆ ಮಾಡಿದಿರಿ ದಂಡಯಾತ್ರೆಯ
ಹೇಳಿದಿರಿ ನಿಮ್ಮ ಗೆಳತಿಯರ ಪರಿಚಯ
ಹಳೇ ಭಾವನೆಗಳಿಗೆ ಹೊಸ ಪ್ರೀತಿಯ
ಸೇರಿಸಿ ಬರೆದಿರಿ ಮಜವಾದ ಕವಿತೆಯ

ಮರಗಿಡಗಳ ಮೇಲಿನ ನಿಮ್ಮ ಪ್ರೀತಿ
ಆಗಿತ್ತು ಅಲ್ಲಿ ಕವನಕ್ಕೆ ಹೊಸ ಸಂಗತಿ
ಗಿಂಡಿಯ ಮಾಣಿ , ಪಿಕಲಾಟದ ಪಜೀತಿ ಜೀ ಹುಜೂರ್
ಇನ್ನು ನಮ್ಮನ್ನು ಕಾಡುತೈತಿ ಹೊಸ
ರಾಮಾಯಾಣದ ಸುಗ್ರೀವರಂತೆ

ಎಲ್ಲರೂ ಕಾಣುವರಂತೆ ನಿಮ್ಮದಿಲ್ಲಿ ಚಿಂತೆ
ನಿಮ್ಮ ಮಾತುಗಳಲ್ಲಿ ನೀವು ಗುರುವಿನಂತೆ
ಅದೇನೇ ಇರಲಿ ಕೊನೆಯಲ್ಲಿ ಮಗುವಿನಂತೆ
ಮರ ಹಿಡಿದ ನಿಮ್ಮನ್ನು ಮಗುವಿನಂತೆ ಕಂಡಿದೆ

ನನ್ನ ಮನಸ್ಸಿನ ನೆನಪುಗಳು ಕವನವಾಗಿದೆ
ಬರೆಯಲು ಹಲವು ದಿನಗಳ ಯೋಚನೆ ಮಾಡಿದೆ
ನೆನಪುಗಳ ನೆನಪು ಸದಾ
ನೆನಪಾಗಿರಲು ಕವನ ಬರೆದೆ.. :)

|| ಪ್ರಶಾಂತ್ ಖಟಾವಕರ್ ||

Friday, December 9, 2011

ಜೀ ಹುಜೂರ್!

ನನ್ನ "ಜೀ ಹುಜೂರ್!" ಕವನಕ್ಕೆ ಭಾವಾರ್ಥ :

(ಸಂಸ್ಥೆಗಳು ಕಾರ್ಮಿಕರನ್ನು ಹೇಗೆ ಬಳಸಿಕೊಳ್ಳುತ್ತವೆ ಮತ್ತು ಕೆಲವು ಚಮಚಾಗಳು ಹೇಗೆ ಬದುಕಿ ಬಿಡುತ್ತವೆ, ಅನ್ನುವುದೇ ಈ ಕವನ)

ಹವಾ ನಿಯಂತ್ರಿತ ಕೊಠಡಿಯಲಿ ಕೂತು ಸಂಸ್ಥೆಯ ಧಣಿಗಳು ಕಿರುಚಾಡಿದರೆ,ಮಳೆ ಬಂದಾಗಷ್ಟೇ ಕಾಣುವ ಯಕ್ಚಿತ್ ಈಚಲ್ ಹುಳುಗಳಂತ ನಮಗೆ ಅಕಾಲದಲ್ಲಿ ರೆಕ್ಕೆ ಬಂದು ಹಾರಾಡಿಬಿಡುತ್ತೇವೆ.

ಬಿಟ್ಟಿಯಾಗಿ ಬಿಟ್ಟಿದ್ದೀವಿ ಇವರಿಗೆ ನಮ್ಮತನ ಫಲವತ್ತಾಗಿದ್ದರೆ ಇಲ್ಲೇಕೆ ಸೇರುತ್ತಿದ್ದೆವು ನಾವು?
ಚಂದ್ರನ ನೆಲದಂತೆ ಸುಖದ ಬೆಳೆ ಕಾಣದಂತವರು,
ಭತ್ತ ಅಕ್ಕಿ ಬಿಟ್ಟು ಅನ್ನ ಹಾಕುತ್ತೀವಿ ಅಂತ ಗಿಲೀಟು ಮಾಡುತ್ತಾರೆ,
ಈ ಸಂಬಳವೋ ಮಳೆಗೆ ತುಂಬೋ ಕುಂಟೆಯಂತಹ ಪುಟ್ಟ ಹೊಂಡ
ಸಂಸಾರ ಖರ್ಚಲಿ ಮುಳಗೆದ್ದರೆ ಕಾಸು ಖಾಲಿ.

ಬ್ರಹ್ಮನೂ ಸಮಯ ಹಾಳು ಮಾಡಿದರು
ಆತ ನಮ್ಮ ಜನುಮದ ಮಹಾನ್ ಲೇಖಕನವನೇ?
ಸುಮ್ಮನೆ ತೀಟೆಗೆ ಗೀಚಿದ್ದಾನೆ
ಬಗ್ಗಿಸಿ ಬರೆದು ಹುಟ್ಟಿಸಿದರಾಯ್ತೇ
ನಮ್ಮ ಮೆದುಳು ತಲೆಯಲಿಲ್ಲ ಅದಿರುವುದೇ ಮಂಡಿ ಚಿಪ್ಪಿನ ಮೇಲೆ
ಕಾಟಾಚರದ ಬರೆದ ಹಣೆ ಬರಹ!

ನಾವೆಲ್ಲ ಹೊರಗೆ ಧೈರ್ಯದ ಮುಖವಾಡ ಧರಿಸಿದ ವೀರರು
ಎಲ್ಲೋ ಕತ್ತಿ ಮಸೆಯುತ್ತಾರೆ ಅಂತ ಭಯ ಪಟ್ಟು
ಮನದ ಬಿಲ ಸೇರಿಕೊಂಡು ಬಕ್ಕಾಬಾರಲು ಮಲಗಿ ಬಿಡುತ್ತೇವೆ,
ಯಾರಾದರೂ ಹೊಗಳಿದರೆ ನಾವು ವಿಕ್ರಮಾದಿತ್ಯರು
ಅವರು ದಾಟಿಸುತ್ತಾರೆ ನಮ್ಮ ಹೆಗಲಿಗೆ ಹೆಣ,
ಛತ್ರಿ ಬುದ್ಧಿಯ ಸಹೋದ್ಯೋಗಿಗಳೇ ನಿಮಗಿದೋ
ಉಧೋ ಉಧೋ ಪ್ರಣಾಮ!

ಕಮ್ಮೀ ಸಂಬಳಕ್ಕೆ ಸಾಕ್ಕಿದ್ದೇವೆ
ಕೆಲಸ ತೆಗೆಯಿರಿ ನಮ್ಮ ಗಣಿ ಆಳಕೂ
ಹಿಂಡಿರಿ ನಮ್ಮ ಕಡೆ ಹನಿ ನಿಮಗೆ ಕಾಸಾಗಲೀ
ಹಿಡಿಯಿರೀ ನಮ್ಮ ಮೂಗು ದಾರ,
ನಿಸ್ತಂತು ಛಾಟಿ ಮೊಬೈಲಿನಲಿ ಆಙ್ಞಾಪಿಸಿರಿ
ಬರಲಿ ಬೆನ್ನ ಬಾಸುಂಡೆ
ನಿಮ್ಮ ತಿಜೋರಿ ದೇಹ ಕೊಬ್ಬಿನಿಂದ ಉಬ್ಬಲಿ, ಹುಜೂರ್!

ಈ ಹೆಗಲು ಇಷ್ಟವಾಯಿತೇ ಸ್ವಾಮಿ?
ಅಂಡೂರಿಸಿ ಬಿಡಿ ಯಮ ಭಾರದ ಕಲಸದ ಒತ್ತಡಕ್ಕೆ ಒಗ್ಗಿದೆ ದೇಹ,
ನಾವಾದರೂ ದಡ್ಡಪ್ಪಗಳು ಹಗಲೆಲ್ಲ ಹೊತ್ತೆವು ಅಂಬಾರಿ
ಒಮ್ಮೆಲೆ ದಿಟ್ಟಿಸಿ ಬೆಚ್ಚಿದೆವು
ಒಳಗೆ ನಿಮ್ಮ ಪೈಶಾಚ್ಯ ಅಟ್ಟಹಾಸ!

ಗಾಜು ಕಿಟಕಿಯ ಹಿಂದಿನ ಕಾವಲು ಕ್ಯಾಮರಾದ
ಬರೀ ಕಣ್ಣ ಕಾವಲು ಸಂಬಳದ ವಾಹನವಿರದ ಕಾಲಾಳುಗಳಾದ ನಮಗೆ
ಕೆಲಸ ಕಳೆದು ಕೊಳ್ಳುವ ಭಯದ ತುರಿಕೆ ಸಾಂಕ್ರಾಮಿಕ...
ಸುಳಿವಿರದ ಸಾವಿಗೆ ಹೆದರಿ
ಬೆವರಿದೆವು ಬೆದರಿದೆವು
ಹಲುಬಿದೆವು ಮುಂದಿರುವ ಸುಖ ಸುಖಿಸದೆ!

[ಈಗ ದಯಮಾಡಿ ಮತ್ತೊಮ್ಮೆ ಕವನ ಓದಿಕೊಳ್ಳಿ :]

http://badari-poems.blogspot.com/2011/12/blog-post.html

ತಣ್ಣನೆ ಅರಮನೆ ಗುಡುಗು
ಈಚಲಿಗೋ ಅಕಾಲ ರೆಕ್ಕೆ!

ಬಿಟ್ಟೇ ಬಿಟ್ಟೀದ್ದೀವಿ ನಮ್ಮೊಳಗ
ಖರಾಬು ಬಂಜರು ಭೂಮಿ
ಉಳುಮೆ ಕಾಣದ ಚಂದ್ರಮೈ,
ಅನ್ನ ಬೆಳೆಯುವ ಗಿಲೀಟೇಕೆ
ಇಲ್ಲಿ ಪ್ರಾಪ್ತಿಯೇ ಕುಂಟೆ
ಮುಳುಗೆದ್ದರೆ ನೀರೇ ಬರಿದು

ಬರಮಪ್ಪನೂ ಸಮಯಗೇಡಿ
ಮಹಾನ್ ಲೇಖಕನವನೇ?
ತೀಟೆ ಶಾಸ್ತ್ರದ ಒಕ್ಕಣೆ
ಬಗ್ಗಿಸಿ ಬರೆದು ಹುಟ್ಟಿಸಿದರಾಯ್ತೇ
ನಮ್ಮ ಮಂಡಿ ಚಿಪ್ಪಿನ ಮೇಲೆ
ಕಾಟಾಚರದ ಹಣೆ ಬರಹ!

ಹೊರಗೆ ಮುಸುಗುವೀರರು
ಕತ್ತಿ ನೂರುವ ಸದ್ಧಿಗಂಜಿ
ಬಿಲದಾಳ ಬಕ್ಕಾಬಾರಲು,
ಪರಾಕ

Sunday, December 4, 2011

ಓಶೋ! : ಸರಿಯೇ ತಪ್ಪೇ?

ಇತ್ತೀಚೆಗೆ ಬ್ಲಾಗ್ ಒಂದರಲ್ಲಿ ಧ್ಯಾನದ ಮುಖೇನ ಮನಃ ಶುದ್ದೀಕರಣದ ಬಗ್ಗೆ ಆ ಲೇಖಕರು ಪ್ರಸ್ತಾಪಿಸುತ್ತಾ, ಓಶೋರವರ ಬೋಧನೆಗಳನ್ನು ಉದಾಹರಿಸಿದರು. ಇದು ಭಾರೀ ಚರ್ಚೆಗೆ ಗ್ರಾಸವಾಯಿತು.

ಓದುಗರೊಬ್ಬರು ಕಮೆಂಟಿಸುತ್ತಾ ಓಶೋ ಸ್ಥಿತಪ್ರಜ್ಞರಲ್ಲ, ಅವರು ಹೊಸ ಆವಿಷ್ಕಾರವನ್ನು ಮಾಡಲು ಹೊರಟು ಗುರಿ ತಲುಪದೇ ಇದ್ದವರು. ಎಂದು ಅಭಿಪ್ರಾಯವನ್ನು ದಾಖಲಿಸಿದರು. ಹೀಗೆ ಯಾವುದನ್ನೂ ಸಾರಾಸಗಟಾಗಿ ತಿರಸ್ಕರಿಸುವುದು ಪೂರ್ವಾಗ್ರಹ ಪೀಡಿತ ಕಲ್ಪನೆ ಅಂತ ನನ್ನ ಅನಿಸಿಕೆ.

ಅವರ ಆಶ್ರಮದ ಅಂತರಂಗದ ಊಹಾಪೋಹ ಸುದ್ದಿಗಳು, ಐಷಾರಾಮಿ ಜೀವನ ಶೈಲಿ ಮತ್ತು ಕಾಸ್ಟ್ಲೀ ಕಾರುಗಳ ಪ್ರೀತಿಗಳ ಹೊರತಾಗಿಯೂ ಅವರ ಅಪಾರ ಙ್ಞಾನ ಸಂಪತ್ತು ಮತ್ತು ಅವರ ನೂರಾರು ಆದ್ಯಾತ್ಮಿಕ ಪುಸ್ತಕ ಬರವಣಿಗೆಯನ್ನು ಗೌರವಿಸಬೇಕಾಗುತ್ತದೆ.

ಶಾಸ್ತ್ರ, ಧರ್ಮ, ಗುರು, ವಾಸ್ತು, ಜ್ಯೋತಿಷ್ಯ, ಸಂಗೀತ ಮತ್ತು ಸೌಂದರ್ಯ ಹೀಗೆ ಅವರವರ ಭಾವನೆಗಳಿಗೆ ಮತ್ತು ನಂಬಿಕೆಗೆ ಬಿಟ್ಟದ್ದು. ಯಾವುದನ್ನು ನಂಬ ಬೇಕು ಯಾರನ್ನು ಒಪ್ಪಬೇಕು ಎನ್ನುವುದು ಪ್ರತಿಯೊಬ್ಬ ಮಾನವನ ವಯುಕ್ತಿಕ ಹಕ್ಕು.

ಓಶೋ ಪರ ವಿರೋಧಿ ಚರ್ಚೆಗಳಿಗೆ ಇದು ವೇದಿಕೆಯಾಗ ಬಾರದು. ಒಳ್ಳೆಯ ವಿಚಾರಗಳು ಎಲ್ಲಿಂದ ಬಂದರೂ ಅದನ್ನು ವಿಶ್ಲೇಷಿಸಿ ಸ್ವೀಕರಿಸಬೇಕೆ ಹೊರತು, ಅದರ ಮೂಲವನ್ನು ಕೆದಕುತ್ತಾ ಕೂರ ಬಾರದು.

ಓಶೋ ತುಂಬಾ ಓದಿಕೊಂಡವರು. ಅವರು ಜಗತ್ತಿನ ಙ್ಞಾನ ಮೂಲಗಳನ್ನು ಅರ್ಥೈಸಿಕೊಂಡವರು. ಅದನ್ನೆಲ್ಲ ಕ್ರೋಢೀಕರಿಸಿ ಪುಸ್ತಕ ಮತ್ತು ದ್ವನಿ ಮುಖೇನ ಇಂದಿಗೂ ಪ್ರಚಲಿತದಲಿ ಇಟ್ಟವರು.
ಪ್ರತಿ ಗುರುವು ಸ್ವಯಂಭು ಗುರುವಾಗಲು ಸಾಧ್ಯವೇ ಇಲ್ಲ. ಆತನದೂ ನಿರಂತರ ಶಿಷ್ಯ ವೃತ್ತಿ. ತಾನು ಗ್ರಹಿಸಿದ, ಕಲಿತ ಅಥವಾ ಓದಿಕೊಂಡ ಙ್ಞಾನವನ್ನು ಆತ ಹಂಚಲು ಕೂರುತ್ತಾನೆ. ಹಲವು ಮೂಲಗಳಿಂದ ನಾವು ಓದಿಕೊಳ್ಳಲಾರದ ಙ್ಞಾನವನ್ನು ಆತ ಶುದ್ಧೀಕರಿಸಿ ನಮಗೆ ಗುಕ್ಕು ನೀಡುತ್ತಾ ಹೋಗುತ್ತಾನೆ.

ಬೋಧನೆಯಲಿ ಸತ್ವವಿಲ್ಲದಿದ್ದರೆ ಅದು ಬೇಗನೆ ಅಪ್ರಸ್ತುತವಾಗಿ ನಶಿಸಿ ಹೋಗುತ್ತದೆ. ಪೊಳ್ಳು ಮಾರಿಕೊಳ್ಳುವ ಡೋಂಗಿ ಗುರುಗಳ ಮದ್ಯೆ ತೀರಿಕೊಂಡು ದಶಕಗಳು ಕಳೆದರೂ ಇನ್ನೂ ಪ್ರಸ್ತುತದಲ್ಲೇ ಉಳಿಯಲು ಅವರಲ್ಲೇನೋ ಗಟ್ಟಿ ಮಾಲು ಇರಬೇಕಲ್ಲವೇ!

ಗೀತೆಯಲ್ಲಿನ ಶ್ಲೋಕಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೇ ವಿನಃ, ಯುದ್ಧ ಭೂಮಿಯಲ್ಲಿ ಎಲ್ಲ ಕೆಲಸ ಬಿಟ್ಟು ಶ್ರೀಕೃಷ್ಣ ಪರಮಾತ್ಮನು ಗೀತಾಮೃತ ಏಕೆ ಬೋಧಿಸಿಕೊಂಡು ಕೂತರು ಎಂದು ಕ್ಯಾತೆ ತೆಗೆದರೆ, ವಾದಕ್ಕೆ ಬೀಳುವುದೇ ವ್ಯರ್ಥ!

ಈ ಲೇಖನಕ್ಕೆ ಕಾರಣವಾದದ್ದು ಡಾ|| ಡಿ.ಟಿ.ಕೆ. ಮೂರ್ತಿಯವರ ಈ ಲೇಖನ. ಬೋನಸ್ ಆಗಿ ಆ ಲೇಖನಕ್ಕೆ ಇತರರು ಕಾಮೆಂಟುಗಳನ್ನೂ ಓದಿರಿ:

"ಧ್ಯಾನದಲ್ಲಿ ಫ್ಲಷ್ ಮಾಡಿ!"
http://dtkmurthy.blogspot.com/2011/12/flush-meditatively.html

Saturday, November 12, 2011

ಬನವಾಸಿಯವರ ಬ್ಲಾಗ್

ಪ್ರವಾಸೋಧ್ಯಮ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ, ಮಂಗಳೂರಿನ ಗೆಳೆಯ ಶ್ರೀಯುತ ಸೋಮಶೇಖರ ಬನವಾಸಿಯವರು ನನ್ನ ಕವನ ಸಾವಿಗೆ ಬಾರದ ನೆಂಟ ಬಗ್ಗೆ ಆತ್ಮೀಯವಾಗಿ ಅವರ ಬ್ಲಾಗಿನಲ್ಲಿ ವಿಶ್ಲೇಷಿಸಿದ್ದಾರೆ.


ಕವಿ ಪ್ರೋತ್ಸಾಹಿ, ಸಹೃದಯಿ ಬನವಾಸಿಯವರ ಬ್ಲಾಗನ್ನು ಹೊಕ್ಕು ನಿಮ್ಮ ಅಭಿಪ್ರಾಯ ಬರೆಯಿರಿ.

http://banavasimaatu.blogspot.com/2011/11/blog-post.html

Saturday, October 1, 2011

ರೀತಿ... (ಭಾಗ ೫)

ಈ ಕಥೆ ಹೊಕ್ಕುವ ಮುನ್ನ ಈ ನಾಲ್ಕೂ ಕಥೆ ಓದಿ
ಆಮೇಲೆ ಈ ೫ನೇ ಭಾಗವನ್ನು ಕೈಗೆತ್ತಿಕೊಳ್ಳೀ....

ಮೊದಲು ಪ್ರಕಾಶಣ್ಣ ಬರೆದ ಕಥೆ ರೀತಿ..........
http://ittigecement.blogspot.com/2011/09/blog-post.html
 
ನಂತರ ದಿನಕರಣ್ಣ ಬರೆದ ಕಥೆ ಈ ರೀತಿ........
http://dinakarmoger.blogspot.com/2011/09/blog-post.html
 
ಆಮೇಲೆ ಪ್ರವೀಣ್ ಬರೆದ ಕಥೆ ಇದೇ ರೀತಿ.......
http://pravi-manadaaladinda.blogspot.com/2011/09/blog-post_27.html
 
ನಮ್ಮೊಳಗೊಬ್ಬ ಬಾಲು ಸರ್ ಸರದಿ!
ಅವರು ಬರೆದ ಕಥೆ ರೀತಿ!! ಈ ರೀತಿ !!! ಇನ್ನೊಂದು ರೀತಿ !!!!
http://nimmolagobba.blogspot.com/2011/09/blog-post_30.html 
 
 
 
 
ಈಗ ನನ್ನ ಸರದಿ...

ರೀತಿ.... (ಭಾಗ ೫)

ಆ ನಾಲ್ವರು ಇಷ್ಟು ಗಾಬರಿಯಿಂದ ನನ್ನತ್ತ 
ಯಾಕೆ ಬರುತ್ತಿದ್ದಾರೆ? ಈತ ಯಾರು ಡಾಕ್ಟರ್? 
ಇವರಿಗೇನು ಹೋಟೆಲಿನಲ್ಲಿ ಕೆಲಸ... 
ಅರೇ ಇದ್ಯಾವ ಹೊಸ ಜಾಗ, ಇವೆಲ್ಲ ಯಾರು... 
ಬರೀ ಡೆಟಾಲ್ ಗಮಲು?

ಮತ್ತೆ ಜಯಂತನ ಹಾಗೂ ರಾಗಿಣಿಯ ಮೊಬೈಲುಗಳು 
ಒಂದೇ ಸಮನೆ ಯಾಕೆ ಬಡೆದುಕೊಳ್ಳುತ್ತಿವೆ?

ನಾನು ಗಾಳಿಯಲ್ಲಿ ತೇಲುತ್ತಿದ್ದಂತಿದೆ, ಕೆಳಗೆ 
ನೋಡಿದೆ. ಎಲ್ಲೋ ನೋಡಿದ ಮುಖ ಅನಿಸಿತು, 
ಮತ್ತೆ ನೋಡಿದೆ ಅಲ್ಲಿ ಹಾಸಿಗೆಯಲ್ಲಿ ನಾನೇ 
ಮಲಗಿದ್ದೇನೆ ಎನಿಸಿತು!

ಅವಳಿಗೆ ಈಗ ಸಣ್ಣದಾಗಿ ಅನುಮಾನ ಬರತೊಡಗಿತು, 
ಸ್ವಲ್ಪ ಸ್ವಲ್ಪ ನೆನಪಾದವು. 
ಹೋಟೆಲಿನಲ್ಲಿ ಕಣ್ಣು ಮಂಜಾಗತೊಡಗಿದ್ದು, 
ಹಿಂದೆ ವಾಲಿದವಳು ಛೇರಿನ ಸಮೇತ ಹಿಂದೆ 
ಬಿದ್ದು ಬಿಟ್ಟಿದ್ದೂ!....

ಛೇ... ಎಂತ ತಪ್ಪು ಮಾಡಿದೆ ಅನಿಸಿಬಿಟ್ಟಿತು.
 
ಸಮಯ ಮೀರಿ ಹೋದ ಮೇಲೆ ನಾನು ಅಲವತ್ತುಕೊಂಡರೆ ಏನು 
ಉಪಯೋಗ? ಹೋಟೆಲ್ ತಲುಪುವಾಗಲೇ 
ನನ್ನ ಹೊಟ್ಟೆ ತುಂಬಾ ತೊಳಸುತ್ತಿತ್ತು. ಕಣ್ಣು ಭಾರಗೊಂಡು 
ಮುಚ್ಚುತ್ತಿತ್ತು. 
ತಲೆ ಸುತ್ತಿ ಬಂದು ಬೀಳುವವಳಿದ್ದೆ. 

"ಪುಟ್ಟಣ್ಣಿ... ಪುಟ್ಟಣ್ಣಿ, ಏನಾಯ್ತು" ಅಂತ 
ಅವರು ನನ್ನ ಕೈ ಹಿಡಿದು ಕೇಳಿದರು :

"ಪಿತ್ಥ" ಎಂದಷ್ಟೇ ಉತ್ತರಿಸಿ ಅವನ ಕೂಡ ನಡೆದೆ. 

ಹೊಟಲ್ ತಲುಪಿದ ಮೇಲೂ ಮನಸು ಅಸ್ವಸ್ಥವಾಗಿತ್ತು.
ಯಾವ ಹೊತ್ತಿನಲ್ಲಿ ಎಲ್ಲಿಂದ ಬಾಂಬ್ ಸಿಡಿಯುವುದೋ 
ಎನ್ನುವ ಭೀತಿಯ ಗಡಿನಾಡ ಹಳ್ಳಿಗನ ಅಮಾಯಕ ಸ್ಥಿತಿಯಂತಿತ್ತು. 
ಅಲ್ಲಿ ಜಯಂತ, ರಾಗಿಣಿ ಪರಿಚಯಗಳಾದ 
ಮೇಲೆ, ಕಥೆ ಸುಖಾಃಂತ್ಯವೂ ಆದ ಮೇಲೆ... 

ಛೇ!.... ನಾನು ದುಡುಕಿ ತಪ್ಪು ಮಾಡಿಬಿಟ್ಟೆ ಅನಿಸಿತು.

ಒಮ್ಮೆಲೆ ಭೂಮಿಯೇ ತಲೆ ಮೇಲೆ ಬಿದ್ದಂತಾಗಿ 
ಛೇರಿನಿಂದ ಹಿಂದೆ ಬಿದ್ದು ಬಿಟ್ಟೆ.
 
ಹೋಟೆಲ್ ಶಾಂತ ವಾತಾವರಣ ಅಲ್ಲೋಲ 
ಕಲ್ಲೋಲವಾಗಿ ಹೋಯ್ತು. ಜಯಂತ್, 
ನನ್ನವರು ಮತ್ತು ರಾಗಿಣಿ ದಿಗ್ ಭ್ರಾಂತರಾಗಿ, 
ಆ ಕ್ಷಣ ಏನು ಮಾಡಲೂ ತೋಚದೆ
ಪರದಾಡಿದರೂ ಅನಿಸುತ್ತದೆ. 
ನನ್ನವರು ರಾಗಿಣಿ ನನ್ನನ್ನು ಮೇಲೆತ್ತಿ 
ಮತ್ತೆ ಛೇರಿನಲ್ಲಿ ಕೂಡಿಸಿದರು.

ಮುಖಕ್ಕೆ ನೀರು ಸಿಂಪಡಿಸಿ "ಚಿನ್ನಾ...ಚಿನ್ನಾ" 
ಅಂತ ಭಯಾತಂಕದಿಂದ ಎಚ್ಚರಿಸಲು 
ನೋಡುತ್ತಿದ್ದರು....

ಆಗಲೇ ನನ್ನ ಬಾಯಿಂದ ನೊರೆ ನೊರೆ....
ಬರಲಾರಂಭಿಸಿತ್ತು.

ಜಯಂತ್ ಆಂಬುಲೆನ್ಸಿಗೆ ಕಾಲ್ ಮಾಡಿದ್ದ ಅಂತ 
ಕಾಣುತ್ತದೆ. ನನ್ನನ್ನು ಸ್ಟ್ರೆಚ್ಚರ್ ಮೇಲೆ 
ತೆಗೆದುಕೊಂಡು ಆಸ್ಪತ್ರೆಗೆ ದೌಡಾಯಿಸಿದರು.

ಹೋಟೆಲ್ಲಿಗೆ ನನ್ನವರನ್ನು ಕರೆದೊಯ್ಯ ಬೇಕು 
ಅಂತ ನಿರ್ಧರಿಸಿದ ಕೂಡಲೇ ನಾನು 
ಮನೆ ಹಿತ್ತಲಲ್ಲಿದ್ದ ಗಿಡಗಳಿಗೆ 
ಸಿಂಪಡಿಸುವ ಕ್ರಿಮಿನಾಶಕವನ್ನು 
ಎತ್ತಿಟ್ಟುಕೊಂಡಿದ್ದೆ.....

ನನ್ನವರು ಫ್ರೆಷ್ ಅಪ್ ಆಗಲು ಬಾತ್ ರೂಂಗೆ ಹೋದ 
ಕೂಡಲೇ ಅಷ್ಟೂ ದ್ರವವನ್ನು ಗಟಗಟನೆ ಕುಡಿದು 
ಮುಗಿಸಿದ್ದೆ. ನನ್ನ ಅತಿರೇಕ, ನನ್ನನ್ನೇ ಸದೆ 
ಬಡಿಯಲಿದೆ, ಅಂತ ಅರಿವಿದ್ದರೂ, ಅಲ್ಲಿಗೆ ಗೆದ್ದದ್ದು
ನನ್ನ ಹಟಮಾರಿತನವೇ!

ಅಕಸ್ಮಾತ್ ಜಯಂತ ಆವತ್ತು ನಮ್ಮ ಕಾಲೇಜ್ 
ಪ್ರವಾಸದಲ್ಲಿ ಇವಳೇ ನನ್ನನ್ನು ಕೈಹಿಡಿದು ಕರೆದಳು, 
ಅಷ್ಟರಲ್ಲಿ ಗೆಳತಿ ಬಾತ್ ರೂಂನಿಂದ ಬಂದಳು 
ಅಂತ ಸಾಧಿಸಿದರೇ.... ನನ್ನ ಗತಿ!

ಮತ್ತೆ ಜಯಂತ್ ಮತ್ತು ರಾಗಿಣಿಯ ಮೊಬೈಲ್ 
ಒಂದೇ ಸಮನೆ ಹೊಡೆದುಕೊಳ್ಳಲು ಶುರುವಾಯ್ತು, 
ಇನ್ನೂ ಶಾಕಿನಲ್ಲೇ ಇದ್ದ ಜಯಂತ ಆಸ್ಪತ್ರೆ 
ಪಡಸಾಲೆಯಲ್ಲಿ ತಲೆ ಮೇಲೆ ಕೈಹೊತ್ತ ನನ್ನವರ 
ಪಕ್ಕ ಕುಳಿತಿದ್ದ. ರಾಗಿಣಿ ಫೋನ್ ಎತ್ತಿದಳು. 
ಅತ್ತಲಿಂದ "ಏನ್... ಚಿನ್ನಾ" ಎನ್ನುವ ದನಿ ಕೇಳಿಸಿತು. 
ರಾಗಿಣಿಗೆ ಏನು ಮಾದಲೂ ತೋಚಲಿಲ್ಲ.

ಅರೇ.. ನನಗ್ಯಾರು ಇಲ್ಲಿ ಹೀಗೆ ಕಾಲ್ ಮಾಡ್ತಾರೆ 
ಅನ್ನುವ ಆಶ್ಚರ್ಯ ಅವಳಿಗಾಯ್ತು.

"ನಿನ್ನ ಕಥೆ ನಿನ್ನ ಗಂಡನಿಗೆ ಗೊತ್ತಾ?" ಕಾಲ್ ಕಟ್ಟಾಯಿತು.

ಪಾಪ, ರಾಗಿಣಿಗೆ ಹೇಳೋಣವೆಂದರೇ ನಾನೇ 
ಮೈಮೇಲೆ ಎಚ್ಚರವಿಲ್ಲದೆ, ಕುಡಿದ ಅಷ್ಟೂ ವಿಷ ಕಕ್ಕಿಸಲು 
ಡಾಕ್ಟರುಗಳು ಬಾಯಿಯಲ್ಲಿ ತುರುಕಿದ ಪೈಪ್ 
ಸಮೇತ ಬಿದ್ದುಕೊಂಡಿದ್ದೆ.

ಅವನು ಪ್ರತಾಪ ನನ್ನ ಪಕ್ಕದ ಮನೆ ಹುಡುಗ 
ರಾಗಿಣಿ ಮತ್ತು ಜಯಂತನಿಯ ನಂಬರ್ ನಾನೇ ಕೊಟ್ಟು 
ಹೀಗೆ ಪದೇ ಪದೇ ಕಾಲ್ ಮಾಡಿ ಹಿಂಸೆಕೊಡಲು 
ನಾನೇ ಹೇಳಿದ್ದೆ. ಆದರೆ, 

ಹೋಟೆಲಿನ ಘಟನೆ ಸುಖಾಂತ್ಯವಾದ ಮೇಲೆ, 
ನಾನು ಪ್ರಯತ್ನಿಸಿದ್ದೇ ಪ್ರತಾಪನ ಮೊಬೈಲಿಗೆ, 
ಅಷ್ಟರಲ್ಲಿ ನಾನೇ ಬಿದ್ದು ಬಿಟ್ಟಿದ್ದೆ.

ಜಯಂತ ಪದೇ ಪದೇ ಬರುವ ಕಾಲುಗಳಿಂದ ರೋಸಿ 
ಹೋಗಿ ಕಡೆಗೆ ಕಾಲ್ ತೆಗೆದುಕೊಂಡ, 
ಅತ್ತಲಿಂದ ವಿಕಟ ನಗೆ 
"ಯಾಕ್, ಬಾಸ್! ಹಳೇ ಸ್ಟೋರಿ ಕೆದಕೋಕ್ಕೆ 
ಹೋಗ್ತೀಯಾ?" 
ಅರ್ಥವಾಗದೇ ಜಯಂತ್ ಕಾಲ್ ಕಟ್ ಮಾಡಿದ.

ಡಾಕ್ಟರ್ ವರೆಂಡಾಕ್ಕೆ ಬಂದು ನನ್ನವರಿಗೆ 
ಏನೋ ಹೇಳಿದಂತಿದೆ. ಈಗ ಆ ನಾಲ್ವರೂ 
ನನ್ನ ಬಳಿ ಬರಲಾರಂಬಿಸಿದರು. ನರ್ಸ್ ನನ್ನ 
ಬಾಯಿಗೆ ಹಾಕಿದ್ದ ಪೈಪ್ ತೆಗೆದು, ಪಕ್ಕದಲ್ಲಿ ನಿಂತಳು.

"ಸಾರಿ, ಎಷ್ಟೋ ಟ್ರೈ ಮಾಡಿದ್ವಿ, ಅವರು ವಿಷ 
ಸೇವಿಸಿ ತುಂಬಾ ಹೊತ್ತಾಗಿತ್ತು... ಅನಿಸುತ್ತೆ" 
ಅಂತ ಹೇಳೀದೊಡನೆ 
ಮೂರು ಜನ ನನ್ನ ದೇಹವನ್ನು ಮುಟ್ಟಿ ಮುಟ್ಟಿ 
ಜೋರಾಗಿ ಅಳಲಾರಂಭಿಸಿದರು.

....

ಅಸಲು, ನನ್ನ ಮಾನಸಿಕ ಆರೋಗ್ಯವೇ 
ಸರಿಯಿಲ್ಲ ಎನಿಸಿತು. ಪರಿಸ್ಥಿತಿಯನ್ನು ನಾನು 
ನೋಡಿದ ರೀತಿಯೇ ಸರಿಯಿಲ್ಲ ಅನಿಸಿತು.

ಮೊದಲು ನನ್ನವರ ಮೊಬೈಲಿಗೆ ಬಂದ ಮೆಸೇಜ್ 
ನನ್ನಲ್ಲಿ ಉಂಟು ಮಾಡಿದ್ದ ಕಂಪನವನ್ನು 
ನಾನು ಶಾಂತ ಚಿತ್ತದಿಂದ ನೋಡಬಹುದಿತ್ತು! 
ನಿಮ್ಮ In Box, Out Box, miss calls,
out going ಮತ್ತು in coming calls
ಯಾಕೆ ಡಿಲೀಟ್ ಆಗಿರ್ತವೆ 
ಅಂತ ನೇರವಾಗಿ ಕೇಳ ಬಹುದಿತ್ತು! 
ನಾನೂ ಕೇಳಲಿಲ್ಲ...

ಇಷ್ಟು ಪ್ರೀತಿಸೋ ಗಂಡ, ಅವನ ಗೆಳತಿ ಮತ್ತು ಜಯಂತ, 
ಒಳ್ಳೆಯ ಮನೆ, ನೆಮ್ಮದಿಯ ಸಂಸಾರ..... 
ಏನಿತ್ತು ಏನಿರಲಿಲ್ಲ ಆದರೂ ನಾನು ಏನೇನೋ 
ಕಲ್ಪಿಸಿಕೊಂಡು ಸುಮ್ಮನೆ ಹಾಳು ಮಾಡಿಕೊಂಡೇ 
ನೋಡಿದರೇ ......

ಈಗ ನಾನೇ ಶವವಾಗಿ ಮಲಗಿದ್ದೇನೆ!

ಥಟ್ ಅಂತ ಎಚ್ಚರವಾಯಿತು. ಹೊರ ಬಾಗಿಲ ಕಾಲಿಂಗ್ 
ಬೆಲ್ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. 
ಸಂಜೆ ಹೋಟೆಲಿಗೆ ಕರೆದೋಯ್ಯಲು ನನ್ನವರು 
ಬಂದಿರಬಹುದು ಅನಿಸಿತು, ಅರೇ ಇನ್ನೂ ನಾನು 
ಮನೆಯಲ್ಲೇ ಇದ್ದೇನೆ, ಸತ್ತಿಲ್ಲ ಕನಸ್ಸಿನಲ್ಲಿದ್ದೆ..... 
ಮೈ ಪೂರ ಬೆವತು ಹೋಗಿತ್ತು....

ಇನ್ನೂ ನಾವು ಹೋಟೆಲ್ಲಿಗೆ ಹೋಗಿಲ್ಲ, 
ಅಲ್ಲಿ ಇನ್ನೇನು ಕಾದಿದೆಯೋ... ಅಂತ ಭಯವಾಯ್ತು...

ಎದ್ದು ಅಲ್ಲೇ ಇದ್ದ ಟ್ವೆಲಿನಲ್ಲಿ ಮುಖ ಒರೆಸಿಕೊಂಡೆ, 
ಕನ್ನಡಿಯಲ್ಲಿ ಚದುರಿದ ತಲೆ ತೀಡಿಕೊಂಡೆ.  

ಬಾಗಿಲು ತೆಗೆದೆ, ಒಮ್ಮೆ ತಲೆ ಸುತ್ತಿ ಬಂದಂತಾಯ್ತು... 
ಯಾರೋ ನಾಲ್ಕು ಜನ ಅಲ್ಲಿ ನಿಂತಿದ್ದರು. 
ಅದರಲ್ಲಿ ಇಬ್ಬರು  ಪುಟ್ಟಣ್ಣಿಯನ್ನು ಆ ಕಡೆ ಈ ಕಡೆ 
ಹಿಡಿದು ನಿಂತಿದ್ದರು.  ನನ್ನ ಯಜಮಾನರ ಬಾಯಲ್ಲಿ, 

ನೊರೆ.... ನೊರೆ...
 

Saturday, September 3, 2011

ಸಿನಿಮಾ - ಸಾಹಿತ್ಯ : 1
ಸಾಹಿತ್ಯ ಪ್ರಕಾರಗಳಲ್ಲಿ ಸಿನಿಮಾ ಸಾಹಿತ್ಯಕ್ಕೂ ತನ್ನದೇ ಗೌರವ ಕಲ್ಪಿಸುವ ಅವಶ್ಯಕತೆಯಿದೆ.

ಯಾವುದೇ ಭಾರತೀಯ ಭಾಷೆಯ ಸಿನಿಮಾವೂ ಹಾಡುಗಳ ಹೊರತಾಗಿ ಅಪೂರ್ಣ ಅನಿಸಿಬಿಡುತ್ತದೆ. ಸಂಗೀತ-ಸಿನಿಮಾ-ಪ್ರೇಕ್ಷಕ ಎಷ್ಟರ ಮಟ್ಟಿಗೆ ಬೆಸೆದು ಹೋಗಿದ್ದರೆ ಎಂದರೆ ಸಿನಿಮಾಗಳಲ್ಲಿ ಹಾಡುಗಳನ್ನೇ ಕಲ್ಪಿಸದೇ ಕಲಾತ್ಮಕ ಚಿತ್ರಗಳೂ ಬಂದವು.

ಕನ್ನಡದ ಮಟ್ಟಿಗೆ ಹೇಳುವುದಾದರೆ, ಚಿ. ಉದಯಶಂಕರ್, ವಿಜಯನಾರಸಿಂಹ, ಹುಣಸೂರು ಕೃಷ್ಣಮೂರ್ತಿ, ಆರ್.ಎನ್. ಜಯಗೋಪಾಲ್, ದೊಡ್ಡರಂಗೇಗೌಡ, ಹಂಸಲೇಖ, ಯೋಗರಾಜ್ ಭಟ್, ಜಯಂತ್ ಕಾಯ್ಕಣಿ ಮುಂತಾದ ಸಾಹಿತಿಗಳು ಅತ್ಯುತ್ತಮ ಸಾಹಿತವನ್ನು ಕೊಡುತ್ತಾ ಬಂದಿದ್ದಾರೆ.

ತೀರಾ ವಿವರಗಳಿಗೆ ಹೋಗುವ ಮುನ್ನ ಕನ್ನಡ ಹಾಡುಗಳ ಶ್ರೇಷ್ಠತೆಯ ಒಂದು ಝಲಕು:

"ಉತ್ತರ ಧ್ರುವದಿಂ ದಕ್ಷಿಣ ಧೃವಕೂ"

"ಪರದೆ ಎತ್ತಿ ಪನ್ನೀರ ಚೆಲ್ಲಿ"

"ತೇರಾ ನೇರಿ ಅಂಬರದಾಗೆ ನೇಸರ ನಗತಾನೆ"

"ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ"

"ಹೃದಯ ರಂಗೋಲಿ ಅಳಿಸುತಿದೆ ಇಂದು"

ಹೀಗೆ...

Monday, August 29, 2011
ಚಿತ : ಲಯನ್ ಜಗಪತಿರಾವ್ (೧೯೯೧)
ಹಾಡು : ಪ್ರೇಮಕೆ ಪರ್ಮಿಟ್ ಬಂತು...


ಈ ಹಾಡಿನ ಬಗ್ಗೆ ಎರಡು ಮಾತು:

೧. ’ಲಯನ್ ಜಗಪತಿರಾವ್’ ಚಿತ್ರಕ್ಕೆ ಛಾಯಾಗ್ರಹಣ ನೀಡಿದವರು ಡಿ.ವಿ. ರಾಜಾರಾಮ್. ನಾನು ಆಗ ಅಪ್ರೈಂಟೀಸ್ ಕ್ಯಾಮರಾಮೆನ್ ಆಗಿ ಅವರ ಜೊತೆ ಈ ಚಿತ್ರಕ್ಕೂ ಕೆಲಸ ಮಾಡುವ ಸೌಭಾಗ್ಯ ಪಡೆದುಕೊಂಡೆ.

೨. ಈ ಚಿತ್ರದ ನಾಯಕ ವಿಷ್ಣುವರ್ಧನ್. ಸಹಜ ಅಭಿನಯ, ಸದಾ ಚಟುವಟಿಕೆಯ ವ್ಯಕ್ತಿತ್ವ ಮತ್ತು ಶೂಟಿಂಗ್ ಸ್ಪಾಟ್ ಪೂರಾ ಓಡಾಡುತ್ತಾ ಎಲ್ಲರ ಜೊತೆ ಹರಟುತ್ತಾ ಬೆರೆತು ಹೋಗುವ ಸ್ವಭಾವ ಅವರದು.

೩. ಈ ಗೀತೆಗೆ ಟ್ರ್ಯಾಕ್ ಹಾಡಿದವರು ಸ್ವತಃ ವಿಷ್ಣು ಸರ್. ಟ್ರ್ಯಾಕನ್ನು ಸ್ಟುಡಿಯೋದಲ್ಲಿ ಟೇಪ್ ರೆಕಾರ್ಡರಿನಲ್ಲಿ ಹಾಕಿ ಕೇಳಿಸಿದರು. ನಾವೆಲ್ಲ ರೋಮಾಂಚಿತರಾದೆವು. ಎಷ್ಟಾದರೂ ಜಿಮ್ಮೀಗಲ್ಲು ಚಿತ್ರದಲ್ಲಿ ಅದ್ಭುತ ಎನಿಸುವ ಹಾಡು ಹಾಡಿ ಜನ ಮನ್ನಣೆ ಗೆದ್ದವರು ಅವರು. ಟ್ರ್ಯಾಕ್ ಸೂಪರ್ ಆಗಿ ಹಾಡಿದ್ದರು. ನಿರ್ಧೇಶಕ ಸಾಯಿ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ ವಿಷ್ಣು ಸಾರ್ ಅವರನ್ನೇ ಒರಿಜಿನಲ್ ಗೀತೆಗೆ ಹಾಡುವಂತೆ ಒತ್ತಾಯಿಸಿದರು.

ಆದರೆ ವಿಷ್ಣು ಸಾರ್, ಈ ಗೀತೆಗೆ ಇನ್ನಷ್ಟು ರೊಮ್ಯಾಂಟಿಕ್ ಟಚ್ ಕೊಡಬಲ್ಲವರು ಎಸ್.ಪಿ.ಬಿ ಯವರು ಅವರಿಂದಲೇ ಹಾಡಿಸಿ ಎಂದು ಒಪ್ಪಿಸಿದರು. ಹಾಗೆ ಬಾಲು ಸರ್ ಕಂಠದಲ್ಲಿ ಮತ್ತೋಂದು ನೂರ್ಕಾಲ ನಿಲ್ಲುವ ಅದ್ಭುತ ಗೀತೆ ಮೂಡಿ ಬಂತು!

ಬೇರೊಬ್ಬ ನಟನಾಗಿದ್ದರೆ ಹೊಗಳಿಗೆಗಳಿಗೆ ಅಟ್ಟಕ್ಕೇರಿ, ತಾನೇ ಒರಿಜನಲ್ ಹಾಡನ್ನೂ ಹಾಡುತ್ತಿದ್ದರು. ಆದರೇ ಸರಳ ಸಜ್ಜನಿಕೆಯ ನಟ ವಿಷ್ಣುವರ್ಧನ್ ಹಾಡಿನ ತೂಕ ಹೆಚ್ಚಿಸಲು ಬಾಲು ಸಾರ್ ಅವರಿಂದಲೇ ಹಾಡಿಸಿದ್ದು ವಿಶೇಷ.

Saturday, June 4, 2011

ಛೇ...

"ನಿಮ್ಮ phone ಮಾತ್ರ ಅಲ್ಲ international calls ಸಹ ನಾನು ಮಾತಾಡಲ್ಲ!"


We are hurt...
ಛೇ! ಯಾಕಾದರೂ ಅಷ್ಟೊಂದು ಯಾರನ್ನಾದರೂ, ವಿನಾಕಾರಣ ಹಚ್ಚಿಕೊಳ್ತೀವೋ? ಅನಿಸುತ್ತದೆ. ಅವರ ಆರೋಗ್ಯ ಕೆಟ್ಟಾಗ ಯಾವ ಪುರುಷಾರ್ಥಕ್ಕೋ ಫೋನ್ ಮಾಡೀ ಮಾಡೀ, ಅವರು call pick ಮಾಡದೇ ಸತಾಯಿಸಿದಾಗ. ಮನಸು ಬಾಡಿ ಹೋಯ್ತು ಅಂದುಕೊಳ್ಳುತ್ತೇವೇ.


ignore ಮಾಡುತ್ತಿದ್ದಾರೆ, ಮರೆತಿದ್ದಾರೆ. ಬಿಡಿ ಶಿವ no issues!


ಆದರೆ facebook ನಲ್ಲೂ, ಬ್ಲಾಗ್ ನಲ್ಲೂ ಅವರ ಪಾಡಿಗೆ ಅವರು ಹೊಸ ಲೇಖನ ಬರೆಯುತ್ತಾ ಯಾರ್ಯಾರಿಗೋ ಕಮೆಂಟ್ ಹಾಕುತ್ತಾ, ಶಬರಿಗಳನ್ನು ಮರೆತು ಬಿಡುತ್ತಾರೆ ನೋಡಿ!


ಆಗ ಮನಸ್ಸು ನೊಂದುಕೊಳ್ಳುತ್ತದೆ. ಸಿಟ್ಟು ಸಿಗರೇಟ್ ಆಗಿ ಸುಟ್ಟು ಹೋಗುತ್ತದೆ.


May God bless the ignorers! ಏನಂತೀರ ಮಿತ್ರರೇ?


Pl. visit my blogs:

Ur comments are pathfinder to me.


Sunday, April 17, 2011


(ಈ ಲೇಖನದ ಉದ್ದೇಶ ನನ್ನ ದೈವ ಭಕ್ತಿಯನ್ನಾಗಲೀ, ಸಾಯಿಬಾಬಾ ಬಗ್ಗೆ ಅತೀವ ಭಕ್ತಿ ವ್ಯಕ್ತಪಡೆಸುವುದಾಗಲೀ ಅಲ್ಲ. ಇಲ್ಲಿನ ಮೂಲ ಉದ್ದೇಶ ನಿಮಗೆ ಅರ್ಥವಾಗಲಿ, ಎಂದಷ್ಟೇ ನನ್ನ ಕಳಕಳಿ.)

ಕೇವಲ ಹಣ ಮಾಡುವ ಉದ್ದೇಶದಿಂದ ಮಠ, ಮಾನ್ಯಗಳನ್ನು ಕಟ್ಟಿಕೊಂಡು, ಆ ಮೂಲಕ ಸರ್ಕಾರದ ಅನುದಾನಗಳನ್ನೂ, ಬಡ್ಜೆಟ್ಟಿನ ಪಾಲನ್ನು ಕೀಳುವ ಹಲವು ಸ್ವಾಮಿಗಳಿದ್ದಾರೆ. ಒಬ್ಬರು ಜಗದ್ಗುರು ಆದರೆ ಮತ್ತೊಬ್ಬರು ಮೂಜಗದ್ಗುರು. ಭಕ್ತ ಸಮೂಹವನ್ನು ಕಟ್ಟಿಕೊಂಡು ಆ ಮೂಲಕ ಕಂಡ ಕಂಡಲ್ಲಿ ಶಾಖಾ ಮಠಗಳನ್ನು ಹಬ್ಬಿಸುವ ಇವುಗಳ ಕ್ರಿಯೆ ಅನುಮಾನಾಸ್ಪದ! ಇವರು ಜಮೀನನ್ನು ಒತ್ತುವರಿ ಮಾಡಿಕೊಂಡ, ಕಾಡನ್ನು ಕಡೆದ ಮತ್ತು ಅಕ್ರಮ ವ್ಯವಹಾರಗಳಲ್ಲಿ ತೊಡಗಿಸಿಕೊಂಡ ಉದಾಹರಣೆಗಳಿವೆ.

ಇಂದಿನ ಮಠ, ಸ್ವಾಮೀಜಿ ಎಂದರೆ, ಆತ ರಾಜಕೀಯವಾಗಿ ಎಷ್ಟು ಪ್ರಭಲವಾಗಿದ್ದಾನೆ? ಮುಖ್ಯ ಮಂತ್ರಿಗಳಿಗೆ ಯಾವಾಗ ಯಾವಾಗ ಜಾಪಳ ಮಾತ್ರೆ ಕೊಡಬಲ್ಲ ಎನ್ನುವುದಷ್ಟೇ ಗೊತ್ತಿರುವ ವಿಚಾರ.

ಹಲವು ಖಾಕಿಗಳ ಆರ್ಥಿಕ, ಸಾಮಾಜಿಕ, ನೈತಿಕ ಅಧಃಪತನಗಳನ್ನು ಕಂಡಿದ್ದೇವೆ. ಹಲವರ ಲೈಂಗಿಕ ಹಗರಣಗಳನ್ನೂ ನೋಡಿದ್ದೇವೆ.

ಈ ನಡುವೆ ಎಲ್ಲೋ ಅಪರೂಪಕ್ಕೆ ತುಮಕೂರಿನ ಸಿದ್ದಗಂಗಾ ಮಠ, ಮಲ್ಲಾಡಿಹಳ್ಳಿ ಮಠ, ಪುಟ್ಟಪರ್ತಿ ಸಾಯಿ ಬಾಬ - ತಮ್ಮ ಸಾಮಾಜಿಕ ಕಳಕಳಿ, ಶೈಕ್ಷಣಿಕ ಯೋಜನೆಗಳಿಂದ ಸಮಾಜಮುಖಿ ಆಗುತ್ತಾರೆ. ಆ ಮೂಲಕ ಅವರು ಪವಾಡ ಪುರುಷರೂ ಆಗುತ್ತಾರೆ.


ನಾನೂ ಸಹ ಶ್ರೀ ಸತ್ಯ ಸಾಯಿ ಬಾಬಾರವರ ಮುದ್ದೇನಹಳ್ಳಿಯ ಶಾಲೆಯಲ್ಲಿ ಕಲಿತವನು. ಅಲ್ಲಿಂದ ಹೊರಬಂದು ೨೫ ವರ್ಷಗಳೇ ಕಳೆದರೂ ಅಲ್ಲಿನ ವಾತಾವರಣ, ಶೈಕ್ಷಣಿಕ ಕಲಿಕೆ ಮತ್ತು ಆರೈಕೆ ಮರೆಯಲಾಗದ ವಿಚಾರಗಳು. ಹಾಗಾಗಿಯೇ ಈಗಲೂ ಕೋಲಾರ ಜಿಲ್ಲೆಯಲ್ಲಿ ಹಲವು ಮನೆಗಳಲ್ಲಿ ಬಾಬಾ ಪೂಜ್ಯನೀಯ.

ಒಬ್ಬ ಸ್ವಾಮಿಯು ತಾನು ಪ್ರವರ್ಧಮಾನಕ್ಕೆ ಬರಲು ಮತ್ತು ಜನರನ್ನು ಸೆಳೆಯಲು ಪವಾಡಗಳಿಗೆ ಮರೆ ಹೋಗಬಹುದು. ಆದರೇ ಇದನ್ನೆ ಸಾಯುವವರೆಗೂ ಮಾಡುತ್ತ. ಜನರಿಗೆ ಮಂಕು ಬೂದಿ ಎರಚಿದರೆ ಮಾತ್ರ ಖಂಡನೀಯ.

ಪುಟ್ಟಪರ್ತಿ ಹಾಗೂ ಅದರ ಸುತ್ತ ಭಾರತದಾದ್ಯಂತ ಅಂಟಿಕೊಂಡಿರುವ ಸಾಮಾಜಿಕ ಸಂಸ್ಥೆಗಳು ಮುಂದೆಯೂ ಇನ್ನೂ ಉತ್ತಮ ಕೆಲಸಮಾಡಲಿ. ಬಾಬಾರವರು ಆರೋಗ್ಯಪೂರ್ಣವಾಗಿ ಹೊರಬರಲಿ. ಯಾಕೆಂದರೆ ಬಾಬಾ ಈಗ ವ್ಯಕ್ತಿಯಾಗಿ ಉಳಿಯದೆ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.