Saturday, October 1, 2011

ರೀತಿ... (ಭಾಗ ೫)

ಈ ಕಥೆ ಹೊಕ್ಕುವ ಮುನ್ನ ಈ ನಾಲ್ಕೂ ಕಥೆ ಓದಿ
ಆಮೇಲೆ ಈ ೫ನೇ ಭಾಗವನ್ನು ಕೈಗೆತ್ತಿಕೊಳ್ಳೀ....

ಮೊದಲು ಪ್ರಕಾಶಣ್ಣ ಬರೆದ ಕಥೆ ರೀತಿ..........
http://ittigecement.blogspot.com/2011/09/blog-post.html
 
ನಂತರ ದಿನಕರಣ್ಣ ಬರೆದ ಕಥೆ ಈ ರೀತಿ........
http://dinakarmoger.blogspot.com/2011/09/blog-post.html
 
ಆಮೇಲೆ ಪ್ರವೀಣ್ ಬರೆದ ಕಥೆ ಇದೇ ರೀತಿ.......
http://pravi-manadaaladinda.blogspot.com/2011/09/blog-post_27.html
 
ನಮ್ಮೊಳಗೊಬ್ಬ ಬಾಲು ಸರ್ ಸರದಿ!
ಅವರು ಬರೆದ ಕಥೆ ರೀತಿ!! ಈ ರೀತಿ !!! ಇನ್ನೊಂದು ರೀತಿ !!!!
http://nimmolagobba.blogspot.com/2011/09/blog-post_30.html 
 
 
 
 
ಈಗ ನನ್ನ ಸರದಿ...

ರೀತಿ.... (ಭಾಗ ೫)

ಆ ನಾಲ್ವರು ಇಷ್ಟು ಗಾಬರಿಯಿಂದ ನನ್ನತ್ತ 
ಯಾಕೆ ಬರುತ್ತಿದ್ದಾರೆ? ಈತ ಯಾರು ಡಾಕ್ಟರ್? 
ಇವರಿಗೇನು ಹೋಟೆಲಿನಲ್ಲಿ ಕೆಲಸ... 
ಅರೇ ಇದ್ಯಾವ ಹೊಸ ಜಾಗ, ಇವೆಲ್ಲ ಯಾರು... 
ಬರೀ ಡೆಟಾಲ್ ಗಮಲು?

ಮತ್ತೆ ಜಯಂತನ ಹಾಗೂ ರಾಗಿಣಿಯ ಮೊಬೈಲುಗಳು 
ಒಂದೇ ಸಮನೆ ಯಾಕೆ ಬಡೆದುಕೊಳ್ಳುತ್ತಿವೆ?

ನಾನು ಗಾಳಿಯಲ್ಲಿ ತೇಲುತ್ತಿದ್ದಂತಿದೆ, ಕೆಳಗೆ 
ನೋಡಿದೆ. ಎಲ್ಲೋ ನೋಡಿದ ಮುಖ ಅನಿಸಿತು, 
ಮತ್ತೆ ನೋಡಿದೆ ಅಲ್ಲಿ ಹಾಸಿಗೆಯಲ್ಲಿ ನಾನೇ 
ಮಲಗಿದ್ದೇನೆ ಎನಿಸಿತು!

ಅವಳಿಗೆ ಈಗ ಸಣ್ಣದಾಗಿ ಅನುಮಾನ ಬರತೊಡಗಿತು, 
ಸ್ವಲ್ಪ ಸ್ವಲ್ಪ ನೆನಪಾದವು. 
ಹೋಟೆಲಿನಲ್ಲಿ ಕಣ್ಣು ಮಂಜಾಗತೊಡಗಿದ್ದು, 
ಹಿಂದೆ ವಾಲಿದವಳು ಛೇರಿನ ಸಮೇತ ಹಿಂದೆ 
ಬಿದ್ದು ಬಿಟ್ಟಿದ್ದೂ!....

ಛೇ... ಎಂತ ತಪ್ಪು ಮಾಡಿದೆ ಅನಿಸಿಬಿಟ್ಟಿತು.
 
ಸಮಯ ಮೀರಿ ಹೋದ ಮೇಲೆ ನಾನು ಅಲವತ್ತುಕೊಂಡರೆ ಏನು 
ಉಪಯೋಗ? ಹೋಟೆಲ್ ತಲುಪುವಾಗಲೇ 
ನನ್ನ ಹೊಟ್ಟೆ ತುಂಬಾ ತೊಳಸುತ್ತಿತ್ತು. ಕಣ್ಣು ಭಾರಗೊಂಡು 
ಮುಚ್ಚುತ್ತಿತ್ತು. 
ತಲೆ ಸುತ್ತಿ ಬಂದು ಬೀಳುವವಳಿದ್ದೆ. 

"ಪುಟ್ಟಣ್ಣಿ... ಪುಟ್ಟಣ್ಣಿ, ಏನಾಯ್ತು" ಅಂತ 
ಅವರು ನನ್ನ ಕೈ ಹಿಡಿದು ಕೇಳಿದರು :

"ಪಿತ್ಥ" ಎಂದಷ್ಟೇ ಉತ್ತರಿಸಿ ಅವನ ಕೂಡ ನಡೆದೆ. 

ಹೊಟಲ್ ತಲುಪಿದ ಮೇಲೂ ಮನಸು ಅಸ್ವಸ್ಥವಾಗಿತ್ತು.
ಯಾವ ಹೊತ್ತಿನಲ್ಲಿ ಎಲ್ಲಿಂದ ಬಾಂಬ್ ಸಿಡಿಯುವುದೋ 
ಎನ್ನುವ ಭೀತಿಯ ಗಡಿನಾಡ ಹಳ್ಳಿಗನ ಅಮಾಯಕ ಸ್ಥಿತಿಯಂತಿತ್ತು. 
ಅಲ್ಲಿ ಜಯಂತ, ರಾಗಿಣಿ ಪರಿಚಯಗಳಾದ 
ಮೇಲೆ, ಕಥೆ ಸುಖಾಃಂತ್ಯವೂ ಆದ ಮೇಲೆ... 

ಛೇ!.... ನಾನು ದುಡುಕಿ ತಪ್ಪು ಮಾಡಿಬಿಟ್ಟೆ ಅನಿಸಿತು.

ಒಮ್ಮೆಲೆ ಭೂಮಿಯೇ ತಲೆ ಮೇಲೆ ಬಿದ್ದಂತಾಗಿ 
ಛೇರಿನಿಂದ ಹಿಂದೆ ಬಿದ್ದು ಬಿಟ್ಟೆ.
 
ಹೋಟೆಲ್ ಶಾಂತ ವಾತಾವರಣ ಅಲ್ಲೋಲ 
ಕಲ್ಲೋಲವಾಗಿ ಹೋಯ್ತು. ಜಯಂತ್, 
ನನ್ನವರು ಮತ್ತು ರಾಗಿಣಿ ದಿಗ್ ಭ್ರಾಂತರಾಗಿ, 
ಆ ಕ್ಷಣ ಏನು ಮಾಡಲೂ ತೋಚದೆ
ಪರದಾಡಿದರೂ ಅನಿಸುತ್ತದೆ. 
ನನ್ನವರು ರಾಗಿಣಿ ನನ್ನನ್ನು ಮೇಲೆತ್ತಿ 
ಮತ್ತೆ ಛೇರಿನಲ್ಲಿ ಕೂಡಿಸಿದರು.

ಮುಖಕ್ಕೆ ನೀರು ಸಿಂಪಡಿಸಿ "ಚಿನ್ನಾ...ಚಿನ್ನಾ" 
ಅಂತ ಭಯಾತಂಕದಿಂದ ಎಚ್ಚರಿಸಲು 
ನೋಡುತ್ತಿದ್ದರು....

ಆಗಲೇ ನನ್ನ ಬಾಯಿಂದ ನೊರೆ ನೊರೆ....
ಬರಲಾರಂಭಿಸಿತ್ತು.

ಜಯಂತ್ ಆಂಬುಲೆನ್ಸಿಗೆ ಕಾಲ್ ಮಾಡಿದ್ದ ಅಂತ 
ಕಾಣುತ್ತದೆ. ನನ್ನನ್ನು ಸ್ಟ್ರೆಚ್ಚರ್ ಮೇಲೆ 
ತೆಗೆದುಕೊಂಡು ಆಸ್ಪತ್ರೆಗೆ ದೌಡಾಯಿಸಿದರು.

ಹೋಟೆಲ್ಲಿಗೆ ನನ್ನವರನ್ನು ಕರೆದೊಯ್ಯ ಬೇಕು 
ಅಂತ ನಿರ್ಧರಿಸಿದ ಕೂಡಲೇ ನಾನು 
ಮನೆ ಹಿತ್ತಲಲ್ಲಿದ್ದ ಗಿಡಗಳಿಗೆ 
ಸಿಂಪಡಿಸುವ ಕ್ರಿಮಿನಾಶಕವನ್ನು 
ಎತ್ತಿಟ್ಟುಕೊಂಡಿದ್ದೆ.....

ನನ್ನವರು ಫ್ರೆಷ್ ಅಪ್ ಆಗಲು ಬಾತ್ ರೂಂಗೆ ಹೋದ 
ಕೂಡಲೇ ಅಷ್ಟೂ ದ್ರವವನ್ನು ಗಟಗಟನೆ ಕುಡಿದು 
ಮುಗಿಸಿದ್ದೆ. ನನ್ನ ಅತಿರೇಕ, ನನ್ನನ್ನೇ ಸದೆ 
ಬಡಿಯಲಿದೆ, ಅಂತ ಅರಿವಿದ್ದರೂ, ಅಲ್ಲಿಗೆ ಗೆದ್ದದ್ದು
ನನ್ನ ಹಟಮಾರಿತನವೇ!

ಅಕಸ್ಮಾತ್ ಜಯಂತ ಆವತ್ತು ನಮ್ಮ ಕಾಲೇಜ್ 
ಪ್ರವಾಸದಲ್ಲಿ ಇವಳೇ ನನ್ನನ್ನು ಕೈಹಿಡಿದು ಕರೆದಳು, 
ಅಷ್ಟರಲ್ಲಿ ಗೆಳತಿ ಬಾತ್ ರೂಂನಿಂದ ಬಂದಳು 
ಅಂತ ಸಾಧಿಸಿದರೇ.... ನನ್ನ ಗತಿ!

ಮತ್ತೆ ಜಯಂತ್ ಮತ್ತು ರಾಗಿಣಿಯ ಮೊಬೈಲ್ 
ಒಂದೇ ಸಮನೆ ಹೊಡೆದುಕೊಳ್ಳಲು ಶುರುವಾಯ್ತು, 
ಇನ್ನೂ ಶಾಕಿನಲ್ಲೇ ಇದ್ದ ಜಯಂತ ಆಸ್ಪತ್ರೆ 
ಪಡಸಾಲೆಯಲ್ಲಿ ತಲೆ ಮೇಲೆ ಕೈಹೊತ್ತ ನನ್ನವರ 
ಪಕ್ಕ ಕುಳಿತಿದ್ದ. ರಾಗಿಣಿ ಫೋನ್ ಎತ್ತಿದಳು. 
ಅತ್ತಲಿಂದ "ಏನ್... ಚಿನ್ನಾ" ಎನ್ನುವ ದನಿ ಕೇಳಿಸಿತು. 
ರಾಗಿಣಿಗೆ ಏನು ಮಾದಲೂ ತೋಚಲಿಲ್ಲ.

ಅರೇ.. ನನಗ್ಯಾರು ಇಲ್ಲಿ ಹೀಗೆ ಕಾಲ್ ಮಾಡ್ತಾರೆ 
ಅನ್ನುವ ಆಶ್ಚರ್ಯ ಅವಳಿಗಾಯ್ತು.

"ನಿನ್ನ ಕಥೆ ನಿನ್ನ ಗಂಡನಿಗೆ ಗೊತ್ತಾ?" ಕಾಲ್ ಕಟ್ಟಾಯಿತು.

ಪಾಪ, ರಾಗಿಣಿಗೆ ಹೇಳೋಣವೆಂದರೇ ನಾನೇ 
ಮೈಮೇಲೆ ಎಚ್ಚರವಿಲ್ಲದೆ, ಕುಡಿದ ಅಷ್ಟೂ ವಿಷ ಕಕ್ಕಿಸಲು 
ಡಾಕ್ಟರುಗಳು ಬಾಯಿಯಲ್ಲಿ ತುರುಕಿದ ಪೈಪ್ 
ಸಮೇತ ಬಿದ್ದುಕೊಂಡಿದ್ದೆ.

ಅವನು ಪ್ರತಾಪ ನನ್ನ ಪಕ್ಕದ ಮನೆ ಹುಡುಗ 
ರಾಗಿಣಿ ಮತ್ತು ಜಯಂತನಿಯ ನಂಬರ್ ನಾನೇ ಕೊಟ್ಟು 
ಹೀಗೆ ಪದೇ ಪದೇ ಕಾಲ್ ಮಾಡಿ ಹಿಂಸೆಕೊಡಲು 
ನಾನೇ ಹೇಳಿದ್ದೆ. ಆದರೆ, 

ಹೋಟೆಲಿನ ಘಟನೆ ಸುಖಾಂತ್ಯವಾದ ಮೇಲೆ, 
ನಾನು ಪ್ರಯತ್ನಿಸಿದ್ದೇ ಪ್ರತಾಪನ ಮೊಬೈಲಿಗೆ, 
ಅಷ್ಟರಲ್ಲಿ ನಾನೇ ಬಿದ್ದು ಬಿಟ್ಟಿದ್ದೆ.

ಜಯಂತ ಪದೇ ಪದೇ ಬರುವ ಕಾಲುಗಳಿಂದ ರೋಸಿ 
ಹೋಗಿ ಕಡೆಗೆ ಕಾಲ್ ತೆಗೆದುಕೊಂಡ, 
ಅತ್ತಲಿಂದ ವಿಕಟ ನಗೆ 
"ಯಾಕ್, ಬಾಸ್! ಹಳೇ ಸ್ಟೋರಿ ಕೆದಕೋಕ್ಕೆ 
ಹೋಗ್ತೀಯಾ?" 
ಅರ್ಥವಾಗದೇ ಜಯಂತ್ ಕಾಲ್ ಕಟ್ ಮಾಡಿದ.

ಡಾಕ್ಟರ್ ವರೆಂಡಾಕ್ಕೆ ಬಂದು ನನ್ನವರಿಗೆ 
ಏನೋ ಹೇಳಿದಂತಿದೆ. ಈಗ ಆ ನಾಲ್ವರೂ 
ನನ್ನ ಬಳಿ ಬರಲಾರಂಬಿಸಿದರು. ನರ್ಸ್ ನನ್ನ 
ಬಾಯಿಗೆ ಹಾಕಿದ್ದ ಪೈಪ್ ತೆಗೆದು, ಪಕ್ಕದಲ್ಲಿ ನಿಂತಳು.

"ಸಾರಿ, ಎಷ್ಟೋ ಟ್ರೈ ಮಾಡಿದ್ವಿ, ಅವರು ವಿಷ 
ಸೇವಿಸಿ ತುಂಬಾ ಹೊತ್ತಾಗಿತ್ತು... ಅನಿಸುತ್ತೆ" 
ಅಂತ ಹೇಳೀದೊಡನೆ 
ಮೂರು ಜನ ನನ್ನ ದೇಹವನ್ನು ಮುಟ್ಟಿ ಮುಟ್ಟಿ 
ಜೋರಾಗಿ ಅಳಲಾರಂಭಿಸಿದರು.

....

ಅಸಲು, ನನ್ನ ಮಾನಸಿಕ ಆರೋಗ್ಯವೇ 
ಸರಿಯಿಲ್ಲ ಎನಿಸಿತು. ಪರಿಸ್ಥಿತಿಯನ್ನು ನಾನು 
ನೋಡಿದ ರೀತಿಯೇ ಸರಿಯಿಲ್ಲ ಅನಿಸಿತು.

ಮೊದಲು ನನ್ನವರ ಮೊಬೈಲಿಗೆ ಬಂದ ಮೆಸೇಜ್ 
ನನ್ನಲ್ಲಿ ಉಂಟು ಮಾಡಿದ್ದ ಕಂಪನವನ್ನು 
ನಾನು ಶಾಂತ ಚಿತ್ತದಿಂದ ನೋಡಬಹುದಿತ್ತು! 
ನಿಮ್ಮ In Box, Out Box, miss calls,
out going ಮತ್ತು in coming calls
ಯಾಕೆ ಡಿಲೀಟ್ ಆಗಿರ್ತವೆ 
ಅಂತ ನೇರವಾಗಿ ಕೇಳ ಬಹುದಿತ್ತು! 
ನಾನೂ ಕೇಳಲಿಲ್ಲ...

ಇಷ್ಟು ಪ್ರೀತಿಸೋ ಗಂಡ, ಅವನ ಗೆಳತಿ ಮತ್ತು ಜಯಂತ, 
ಒಳ್ಳೆಯ ಮನೆ, ನೆಮ್ಮದಿಯ ಸಂಸಾರ..... 
ಏನಿತ್ತು ಏನಿರಲಿಲ್ಲ ಆದರೂ ನಾನು ಏನೇನೋ 
ಕಲ್ಪಿಸಿಕೊಂಡು ಸುಮ್ಮನೆ ಹಾಳು ಮಾಡಿಕೊಂಡೇ 
ನೋಡಿದರೇ ......

ಈಗ ನಾನೇ ಶವವಾಗಿ ಮಲಗಿದ್ದೇನೆ!

ಥಟ್ ಅಂತ ಎಚ್ಚರವಾಯಿತು. ಹೊರ ಬಾಗಿಲ ಕಾಲಿಂಗ್ 
ಬೆಲ್ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. 
ಸಂಜೆ ಹೋಟೆಲಿಗೆ ಕರೆದೋಯ್ಯಲು ನನ್ನವರು 
ಬಂದಿರಬಹುದು ಅನಿಸಿತು, ಅರೇ ಇನ್ನೂ ನಾನು 
ಮನೆಯಲ್ಲೇ ಇದ್ದೇನೆ, ಸತ್ತಿಲ್ಲ ಕನಸ್ಸಿನಲ್ಲಿದ್ದೆ..... 
ಮೈ ಪೂರ ಬೆವತು ಹೋಗಿತ್ತು....

ಇನ್ನೂ ನಾವು ಹೋಟೆಲ್ಲಿಗೆ ಹೋಗಿಲ್ಲ, 
ಅಲ್ಲಿ ಇನ್ನೇನು ಕಾದಿದೆಯೋ... ಅಂತ ಭಯವಾಯ್ತು...

ಎದ್ದು ಅಲ್ಲೇ ಇದ್ದ ಟ್ವೆಲಿನಲ್ಲಿ ಮುಖ ಒರೆಸಿಕೊಂಡೆ, 
ಕನ್ನಡಿಯಲ್ಲಿ ಚದುರಿದ ತಲೆ ತೀಡಿಕೊಂಡೆ.  

ಬಾಗಿಲು ತೆಗೆದೆ, ಒಮ್ಮೆ ತಲೆ ಸುತ್ತಿ ಬಂದಂತಾಯ್ತು... 
ಯಾರೋ ನಾಲ್ಕು ಜನ ಅಲ್ಲಿ ನಿಂತಿದ್ದರು. 
ಅದರಲ್ಲಿ ಇಬ್ಬರು  ಪುಟ್ಟಣ್ಣಿಯನ್ನು ಆ ಕಡೆ ಈ ಕಡೆ 
ಹಿಡಿದು ನಿಂತಿದ್ದರು.  ನನ್ನ ಯಜಮಾನರ ಬಾಯಲ್ಲಿ, 

ನೊರೆ.... ನೊರೆ...