Sunday, April 17, 2011


(ಈ ಲೇಖನದ ಉದ್ದೇಶ ನನ್ನ ದೈವ ಭಕ್ತಿಯನ್ನಾಗಲೀ, ಸಾಯಿಬಾಬಾ ಬಗ್ಗೆ ಅತೀವ ಭಕ್ತಿ ವ್ಯಕ್ತಪಡೆಸುವುದಾಗಲೀ ಅಲ್ಲ. ಇಲ್ಲಿನ ಮೂಲ ಉದ್ದೇಶ ನಿಮಗೆ ಅರ್ಥವಾಗಲಿ, ಎಂದಷ್ಟೇ ನನ್ನ ಕಳಕಳಿ.)

ಕೇವಲ ಹಣ ಮಾಡುವ ಉದ್ದೇಶದಿಂದ ಮಠ, ಮಾನ್ಯಗಳನ್ನು ಕಟ್ಟಿಕೊಂಡು, ಆ ಮೂಲಕ ಸರ್ಕಾರದ ಅನುದಾನಗಳನ್ನೂ, ಬಡ್ಜೆಟ್ಟಿನ ಪಾಲನ್ನು ಕೀಳುವ ಹಲವು ಸ್ವಾಮಿಗಳಿದ್ದಾರೆ. ಒಬ್ಬರು ಜಗದ್ಗುರು ಆದರೆ ಮತ್ತೊಬ್ಬರು ಮೂಜಗದ್ಗುರು. ಭಕ್ತ ಸಮೂಹವನ್ನು ಕಟ್ಟಿಕೊಂಡು ಆ ಮೂಲಕ ಕಂಡ ಕಂಡಲ್ಲಿ ಶಾಖಾ ಮಠಗಳನ್ನು ಹಬ್ಬಿಸುವ ಇವುಗಳ ಕ್ರಿಯೆ ಅನುಮಾನಾಸ್ಪದ! ಇವರು ಜಮೀನನ್ನು ಒತ್ತುವರಿ ಮಾಡಿಕೊಂಡ, ಕಾಡನ್ನು ಕಡೆದ ಮತ್ತು ಅಕ್ರಮ ವ್ಯವಹಾರಗಳಲ್ಲಿ ತೊಡಗಿಸಿಕೊಂಡ ಉದಾಹರಣೆಗಳಿವೆ.

ಇಂದಿನ ಮಠ, ಸ್ವಾಮೀಜಿ ಎಂದರೆ, ಆತ ರಾಜಕೀಯವಾಗಿ ಎಷ್ಟು ಪ್ರಭಲವಾಗಿದ್ದಾನೆ? ಮುಖ್ಯ ಮಂತ್ರಿಗಳಿಗೆ ಯಾವಾಗ ಯಾವಾಗ ಜಾಪಳ ಮಾತ್ರೆ ಕೊಡಬಲ್ಲ ಎನ್ನುವುದಷ್ಟೇ ಗೊತ್ತಿರುವ ವಿಚಾರ.

ಹಲವು ಖಾಕಿಗಳ ಆರ್ಥಿಕ, ಸಾಮಾಜಿಕ, ನೈತಿಕ ಅಧಃಪತನಗಳನ್ನು ಕಂಡಿದ್ದೇವೆ. ಹಲವರ ಲೈಂಗಿಕ ಹಗರಣಗಳನ್ನೂ ನೋಡಿದ್ದೇವೆ.

ಈ ನಡುವೆ ಎಲ್ಲೋ ಅಪರೂಪಕ್ಕೆ ತುಮಕೂರಿನ ಸಿದ್ದಗಂಗಾ ಮಠ, ಮಲ್ಲಾಡಿಹಳ್ಳಿ ಮಠ, ಪುಟ್ಟಪರ್ತಿ ಸಾಯಿ ಬಾಬ - ತಮ್ಮ ಸಾಮಾಜಿಕ ಕಳಕಳಿ, ಶೈಕ್ಷಣಿಕ ಯೋಜನೆಗಳಿಂದ ಸಮಾಜಮುಖಿ ಆಗುತ್ತಾರೆ. ಆ ಮೂಲಕ ಅವರು ಪವಾಡ ಪುರುಷರೂ ಆಗುತ್ತಾರೆ.


ನಾನೂ ಸಹ ಶ್ರೀ ಸತ್ಯ ಸಾಯಿ ಬಾಬಾರವರ ಮುದ್ದೇನಹಳ್ಳಿಯ ಶಾಲೆಯಲ್ಲಿ ಕಲಿತವನು. ಅಲ್ಲಿಂದ ಹೊರಬಂದು ೨೫ ವರ್ಷಗಳೇ ಕಳೆದರೂ ಅಲ್ಲಿನ ವಾತಾವರಣ, ಶೈಕ್ಷಣಿಕ ಕಲಿಕೆ ಮತ್ತು ಆರೈಕೆ ಮರೆಯಲಾಗದ ವಿಚಾರಗಳು. ಹಾಗಾಗಿಯೇ ಈಗಲೂ ಕೋಲಾರ ಜಿಲ್ಲೆಯಲ್ಲಿ ಹಲವು ಮನೆಗಳಲ್ಲಿ ಬಾಬಾ ಪೂಜ್ಯನೀಯ.

ಒಬ್ಬ ಸ್ವಾಮಿಯು ತಾನು ಪ್ರವರ್ಧಮಾನಕ್ಕೆ ಬರಲು ಮತ್ತು ಜನರನ್ನು ಸೆಳೆಯಲು ಪವಾಡಗಳಿಗೆ ಮರೆ ಹೋಗಬಹುದು. ಆದರೇ ಇದನ್ನೆ ಸಾಯುವವರೆಗೂ ಮಾಡುತ್ತ. ಜನರಿಗೆ ಮಂಕು ಬೂದಿ ಎರಚಿದರೆ ಮಾತ್ರ ಖಂಡನೀಯ.

ಪುಟ್ಟಪರ್ತಿ ಹಾಗೂ ಅದರ ಸುತ್ತ ಭಾರತದಾದ್ಯಂತ ಅಂಟಿಕೊಂಡಿರುವ ಸಾಮಾಜಿಕ ಸಂಸ್ಥೆಗಳು ಮುಂದೆಯೂ ಇನ್ನೂ ಉತ್ತಮ ಕೆಲಸಮಾಡಲಿ. ಬಾಬಾರವರು ಆರೋಗ್ಯಪೂರ್ಣವಾಗಿ ಹೊರಬರಲಿ. ಯಾಕೆಂದರೆ ಬಾಬಾ ಈಗ ವ್ಯಕ್ತಿಯಾಗಿ ಉಳಿಯದೆ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.