Tuesday, September 4, 2012

ಗುರುಭ್ಯೋ ನಮಃ


ಗುರುಗಳೆಂದರೆ ನಮಗೆ ನಮ್ಮ ಶಿಕ್ಷಕರು, ವಿಮರ್ಷಕರು, ಪರೀಕ್ಷರು ಮತ್ತು ಕರಿ ಬಸಜ್ಜನಂತಹ ದೇವರುಗಳು. ಸದಾ ನಮ್ಮನ್ನು ಸರಿ ದಿಕ್ಕಿನಲ್ಲೇ ಮುನ್ನಡೆಸುವ ಇವರ ನಿಸ್ವಾರ್ಥ ಪ್ರೀತಿಯು ನಮ್ಮ ಬಾಳ ಬೆಳಕು.

ಶಾಲೆಯಲಿ ಕಲಿಸಿದ ಗುರುಗಳು ನಮ್ಮ ಬದುಕಲ್ಲಿ ಎನಿತು ಮುಖ್ಯರಾಗುತ್ತಾರೋ ಅಂತೆಯೇ ನಮ್ಮ ಬದುಕಲ್ಲಿ ಪಾಠ ಕಲಿಸಿದವರೂ ನಮಗೆ ಗುರುಗಳ ಸಮಾನರೇ.

ಬದುಕಿನ ಎಷ್ಟೋ ಕಹಿ ಘಟನೆಗಳನ್ನು ಹುಟ್ಟು ಹಾಕುವ ಆಪ್ತರಿಂದ ನಾವು ಪಾಠ ಕಲಿತಿರುತ್ತೇವೆ. ಅಂತಹ ಅನುಭವವು ನಮ್ಮನ್ನು ಹೊಸ ದಿಕ್ಕಿಗೆ ಹೊಸ ಆಲೋಚನೆಗಳಿಗೆ ಮತ್ತಷ್ಟು ಹುಷಾರಾಗಿಯೂ ಉತ್ಸಹಕತೆಯಿಂದಲೂ ಮುನ್ನಡೆಸುತ್ತದೆ. ಇವರೂ ನಮಗೆ ಗುರುಗಳೇ.

ಶಾಲೆ ಕಾಲೇಜುಗಳ ಉಪಾದ್ಯಾಯ ಪ್ರಾಧ್ಯಾಪಕರ ಜೊತೆಗೆ ನಮಗೆ ಹೊರ ಜಗತ್ತಿನಲ್ಲಿ ಕೆಲಸ ಕಲಿಸುವ ನಮ್ಮನ್ನು ತಿದ್ದುವ ಎಲ್ಲರೂ ನಮಗೆ ಗುರು ಸಮಾನರೇ.

ಕ್ಯಾಮರಾ ಹೇಳಿಕೊಟ್ಟವರು, ಗಣಕಯಂತ್ರ ಕಲಿಸಿದವರೂ, ಬ್ಲಾಗ್ ಪರಿಚಯಿಸಿದವರೂ, ನನ್ನ ಕವನಗಳನ್ನು ಮುಲಾಜಿಲ್ಲದೆ ತಿದ್ದಿದವರೂ, ನನ್ನ ವಸ್ತ್ರ ವಿನ್ಯಾಸ ಮಾಡುವ ದರ್ಜಿ ಜೊತೆಗೆ ಅನುಕ್ಷಣ ನಮ್ಮನ್ನು ತಿದ್ದುವುದರಲ್ಲೇ ಮೆತ್ತಗಾಗುವ ನಮ್ಮ ಬಾಳ ಸಂಗಾತಿಗಳೂ ನಮಗೆ ಗುರುಗಳೇ.

"ಹೊರ ಜಗವ ತೋರುವರು
ಒಳ ತೋಟಿ ನೀಗುವರು
ಬುದ್ದಿ ಸಾಣೆ ಹಿಡಿವವರು
ಅವ್ಯಕ್ತ ಬೆತ್ತಗಾಹಿಗಳು
ಎನಿತೋ ನನಗೆ
ದಿನ ದಿನ ಗುರುಗಳು..."