Saturday, November 27, 2010

ಇಂದಿಗಿಂತ ಅಂದೇನೆ ಚಂದವೋ...


ನಾನು ನನ್ನ ಕುಟುಂಬವನ್ನು ಬಿಟ್ಟರೆ ಅತ್ಯಂತ ಪ್ರೀತಿಸುವುದು ನನ್ನ ಬೆಂಗಳೂರನ್ನು. ಒಮ್ಮೆ ಗೆಳತಿಯಂತೆ, ಇನ್ನೊಮ್ಮೆ ಪ್ರೇಯಸಿಯಂತೆ, ಮನಸು ಬಾಡಿದಾಗ ಥೇಟ್ ಹೆತ್ತಮ್ಮನಂತೆ ನನಗೆ ಬೆಂಗಳೂರು, ಆಪ್ತವಾಗುವ ನನ್ನೂರು. ಹುಟ್ಟಿ ಬೆಳೆದದ್ದೆಲ್ಲ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯಾದರೂ ಬದುಕು ಕಟ್ಟಿಕೊಂಡದ್ದು ಇಲ್ಲೆ. ಭಗವಂತ ಅವಕಾಶ ಕೊಟ್ಟರೆ ನನ್ನ ಕಡೆ ಯಾತ್ರೆಯೂ ಹರಿಶ್ಚಂದ್ರ ಘಾಟ್ ಕಡೆಗೆ!

ನಾನು ಹತ್ತನೇ ಕ್ಲಾಸ್ ಮುದ್ದೇನಹಳ್ಳಿಯಲ್ಲಿ ಮುಗಿಸಿ, ಪಿ.ಯು.ಸಿ ಓದಲು ಬೆಂಗಳೂರಿಗೆ ಬಂದದ್ದು ೧೯೮೫ರಲ್ಲಿ. ಅದಾಗಲೆ ನನ್ನ ಏಳು ಜನ ಅಣ್ಣಂದಿರಲ್ಲಿ ನಾಲ್ಕು ಜನ ಬೆಂಗಳೂರಿನಲ್ಲೆ ನೆಲಸಿಯಾಗಿತ್ತು. ಮೂರನೇ ಅಣ್ಣ ಡಾ. ಗೋವಿಂದರಜುಲು ಮಕ್ಕಳ ತಙ್ಞರಾಗಿ ತುಬಾ ಹೆಸರು ಮಾಡಿದ್ದರು.
ವಿ.ವಿ. ಪುರಂ, ಪ್ಯಾಲೆಸ್ ಗುಟ್ಟಹಳ್ಳಿ, ಚಾಮಾರಾಜ ಪೇಟೆ, ಮಲ್ಲೇಶ್ವರಂ, ಗಂಗೇನಹಳ್ಳಿ ಹೀಗೆ ನನ್ನ ವಿಳಾಸ ಬದಲಾದಂತೆಲ್ಲ ಬೆಂಗಳೂರೂ ಸಾಕಷ್ಟು ಬದಲಾಗುತ್ತ ಹೋಯಿತು.

ನನಗೇ ನೆನಪಿದ್ದಂತೆ ಹೆಬ್ಬಾಳ ವೆಟರ್ನರಿ ಕಾಲೇಜು ದಾಟಿದರೆ ಸರಹದ್ದೆ ಮುಗಿದೇ ಹೊಗುತಿತ್ತು. ನಗರ ಸಾರಿಗೆ ಬಸ್ಸುಗಳಲ್ಲಿ ೩೦, ೪೦, ೫೦ ಪೈಸೆ ಟಿಕೆಟ್ ಇರುತ್ತಿತ್ತು. ಚಾಮರಾಜ ಪೇಟೆಯ ೪ನೇ ಮುಖ್ಯ ರಸ್ತೆಯ ಪುರಾತನ ಗಜಾನನ ಹೋಟೆಲಿನಲ್ಲಿ ೭೦ ಪೈಸೆಗೆ ಊರಗಲ ಮಸಾಲೆ ದೋಸೆ, ಕೇಳಿದವರಿಗೆ ಕೇಳಿದಷ್ಟು ಚಟ್ನಿ ಸಾಂಬರು, ೩೦ ಪೈಸೆಗೆ ಚಂಬು ಲೆಕ್ಕದಲ್ಲಿ ಕಾಫಿ! ಎರಡೂವರೆ ರೂಪಾಯಿಗೆಲ್ಲ ಥೀಯಟರುಗಳಲ್ಲಿ ಕನ್ನಡ ಸಿನಿಮಾಗಳೂ, ೧೦೦೦ಕ್ಕೆ ಬಾಡಿಗೆಗೆ ಎರಡು ರೂಮಿನ ಮನೆ, ೨೦೦ ರೂಪಾಯಿಗೆಲ್ಲ ಮೂಲೆ ಶೆಟ್ಟರ ಅಂಗಡಿಯಲ್ಲಿ ತಿಂಗಳ ರೆಷನ್ನೂ. ಸಂಪೇ ಬೇಕಿರದೆ ದಿನ ಪೂರ ಸುರಿದು ಹೋಗುತ್ತಿದ್ದ ಕಾರ್ಪೊರೇಷನ್ ನೀರು.

ಹೀಗೆ ಪಟ್ಟಿ ಬೆಳೆಯುತ್ತದೆ. ನನಗೆ ಫ್ರೀ ಹಾಸ್ಟೆಲ್ನಲ್ಲಿ ವಾಸ್ತವ್ಯ, ತಿಂಡಿ ಊಟ ಅಲ್ಲೇ ಮುಗಿಯುತಿತ್ತು. ನನಗೆ ಅಣ್ಣಂದಿರು ಕೊಡುತ್ತಿದ್ದದ್ದೇ ೫೦ ರೂಪಾಯಿ ಪಾಕೆಟ್ ಮನಿ ಅದರಲ್ಲೆ ವಾರ ಪೂರ ಊರೆಲ್ಲ ಅಲೆದಾಡಿ, ಪ್ಯಾಕು ಗಟ್ಟಲೆ ಸಿಗರೇಟು ಸುಟ್ಟು, ಸಂಜೆಗೆ ಸಜ್ಜನ್ ರಾವ್ ಸರ್ಕಲ್ಲಿನ ಅಸಂಖ್ಯಾತ ಗಾಡಿಗಳಲ್ಲಿ ಪಾನಿ ಪುರಿಯೋ ಬಾತ್ ಮಸಾಲೆಯೋ ತಿಂದು, ಸ್ನೇಹಿತರಿಗೆ ಬಾದಾಮಿ ಹಾಲು ಕುಡಿಸಿಯೂ ವಾರದ ಕೊನೆಗೆ ರಾಜಣ್ಣಾ, ವಿಷ್ಣು, ಶಿವಣ್ಣ, ಅಂಬಿ ಸಿನಿಮಾಗಳಿಗೆ ಬಾಲ್ಕಾನಿ ಟಿಕೇಟಿಗೆ ಕಾಸು ಮಿಕ್ಕಿರುತಿತ್ತು.
ಆಗೆಲ್ಲ ನನ್ನೂರು ಇಷ್ಟು ತುಟ್ಟಿಯಾಗಿರಲಿಲ್ಲ. ತೀರಾ ಭಾನುವಾರ ೧೦೦೦ದ ನೋಟು ಜೇಬಲ್ಲಿ ಮಡಗಿಕೊಂಡು, ಹೆಂಡತಿ ಕರೆದುಕೊಂಡು ಸಿನಿಮಾಗೆ ಅಂತ ಹೋದರೂ... ಕಡೆಗೆ ಪಾರ್ಕಿಂಗ್ ದುಡ್ಡೂ ಅವಳೇ ಸಾಲ ಕೊಡುವಂತ ಕಾಲ ಆವಾಗಿರಲಿಲ್ಲ!

ಕಾಲ ಕೆಟ್ಟೋಯ್ತು ಬಿಡ್ರಿ...