Friday, December 9, 2011

ಜೀ ಹುಜೂರ್!

ನನ್ನ "ಜೀ ಹುಜೂರ್!" ಕವನಕ್ಕೆ ಭಾವಾರ್ಥ :

(ಸಂಸ್ಥೆಗಳು ಕಾರ್ಮಿಕರನ್ನು ಹೇಗೆ ಬಳಸಿಕೊಳ್ಳುತ್ತವೆ ಮತ್ತು ಕೆಲವು ಚಮಚಾಗಳು ಹೇಗೆ ಬದುಕಿ ಬಿಡುತ್ತವೆ, ಅನ್ನುವುದೇ ಈ ಕವನ)

ಹವಾ ನಿಯಂತ್ರಿತ ಕೊಠಡಿಯಲಿ ಕೂತು ಸಂಸ್ಥೆಯ ಧಣಿಗಳು ಕಿರುಚಾಡಿದರೆ,ಮಳೆ ಬಂದಾಗಷ್ಟೇ ಕಾಣುವ ಯಕ್ಚಿತ್ ಈಚಲ್ ಹುಳುಗಳಂತ ನಮಗೆ ಅಕಾಲದಲ್ಲಿ ರೆಕ್ಕೆ ಬಂದು ಹಾರಾಡಿಬಿಡುತ್ತೇವೆ.

ಬಿಟ್ಟಿಯಾಗಿ ಬಿಟ್ಟಿದ್ದೀವಿ ಇವರಿಗೆ ನಮ್ಮತನ ಫಲವತ್ತಾಗಿದ್ದರೆ ಇಲ್ಲೇಕೆ ಸೇರುತ್ತಿದ್ದೆವು ನಾವು?
ಚಂದ್ರನ ನೆಲದಂತೆ ಸುಖದ ಬೆಳೆ ಕಾಣದಂತವರು,
ಭತ್ತ ಅಕ್ಕಿ ಬಿಟ್ಟು ಅನ್ನ ಹಾಕುತ್ತೀವಿ ಅಂತ ಗಿಲೀಟು ಮಾಡುತ್ತಾರೆ,
ಈ ಸಂಬಳವೋ ಮಳೆಗೆ ತುಂಬೋ ಕುಂಟೆಯಂತಹ ಪುಟ್ಟ ಹೊಂಡ
ಸಂಸಾರ ಖರ್ಚಲಿ ಮುಳಗೆದ್ದರೆ ಕಾಸು ಖಾಲಿ.

ಬ್ರಹ್ಮನೂ ಸಮಯ ಹಾಳು ಮಾಡಿದರು
ಆತ ನಮ್ಮ ಜನುಮದ ಮಹಾನ್ ಲೇಖಕನವನೇ?
ಸುಮ್ಮನೆ ತೀಟೆಗೆ ಗೀಚಿದ್ದಾನೆ
ಬಗ್ಗಿಸಿ ಬರೆದು ಹುಟ್ಟಿಸಿದರಾಯ್ತೇ
ನಮ್ಮ ಮೆದುಳು ತಲೆಯಲಿಲ್ಲ ಅದಿರುವುದೇ ಮಂಡಿ ಚಿಪ್ಪಿನ ಮೇಲೆ
ಕಾಟಾಚರದ ಬರೆದ ಹಣೆ ಬರಹ!

ನಾವೆಲ್ಲ ಹೊರಗೆ ಧೈರ್ಯದ ಮುಖವಾಡ ಧರಿಸಿದ ವೀರರು
ಎಲ್ಲೋ ಕತ್ತಿ ಮಸೆಯುತ್ತಾರೆ ಅಂತ ಭಯ ಪಟ್ಟು
ಮನದ ಬಿಲ ಸೇರಿಕೊಂಡು ಬಕ್ಕಾಬಾರಲು ಮಲಗಿ ಬಿಡುತ್ತೇವೆ,
ಯಾರಾದರೂ ಹೊಗಳಿದರೆ ನಾವು ವಿಕ್ರಮಾದಿತ್ಯರು
ಅವರು ದಾಟಿಸುತ್ತಾರೆ ನಮ್ಮ ಹೆಗಲಿಗೆ ಹೆಣ,
ಛತ್ರಿ ಬುದ್ಧಿಯ ಸಹೋದ್ಯೋಗಿಗಳೇ ನಿಮಗಿದೋ
ಉಧೋ ಉಧೋ ಪ್ರಣಾಮ!

ಕಮ್ಮೀ ಸಂಬಳಕ್ಕೆ ಸಾಕ್ಕಿದ್ದೇವೆ
ಕೆಲಸ ತೆಗೆಯಿರಿ ನಮ್ಮ ಗಣಿ ಆಳಕೂ
ಹಿಂಡಿರಿ ನಮ್ಮ ಕಡೆ ಹನಿ ನಿಮಗೆ ಕಾಸಾಗಲೀ
ಹಿಡಿಯಿರೀ ನಮ್ಮ ಮೂಗು ದಾರ,
ನಿಸ್ತಂತು ಛಾಟಿ ಮೊಬೈಲಿನಲಿ ಆಙ್ಞಾಪಿಸಿರಿ
ಬರಲಿ ಬೆನ್ನ ಬಾಸುಂಡೆ
ನಿಮ್ಮ ತಿಜೋರಿ ದೇಹ ಕೊಬ್ಬಿನಿಂದ ಉಬ್ಬಲಿ, ಹುಜೂರ್!

ಈ ಹೆಗಲು ಇಷ್ಟವಾಯಿತೇ ಸ್ವಾಮಿ?
ಅಂಡೂರಿಸಿ ಬಿಡಿ ಯಮ ಭಾರದ ಕಲಸದ ಒತ್ತಡಕ್ಕೆ ಒಗ್ಗಿದೆ ದೇಹ,
ನಾವಾದರೂ ದಡ್ಡಪ್ಪಗಳು ಹಗಲೆಲ್ಲ ಹೊತ್ತೆವು ಅಂಬಾರಿ
ಒಮ್ಮೆಲೆ ದಿಟ್ಟಿಸಿ ಬೆಚ್ಚಿದೆವು
ಒಳಗೆ ನಿಮ್ಮ ಪೈಶಾಚ್ಯ ಅಟ್ಟಹಾಸ!

ಗಾಜು ಕಿಟಕಿಯ ಹಿಂದಿನ ಕಾವಲು ಕ್ಯಾಮರಾದ
ಬರೀ ಕಣ್ಣ ಕಾವಲು ಸಂಬಳದ ವಾಹನವಿರದ ಕಾಲಾಳುಗಳಾದ ನಮಗೆ
ಕೆಲಸ ಕಳೆದು ಕೊಳ್ಳುವ ಭಯದ ತುರಿಕೆ ಸಾಂಕ್ರಾಮಿಕ...
ಸುಳಿವಿರದ ಸಾವಿಗೆ ಹೆದರಿ
ಬೆವರಿದೆವು ಬೆದರಿದೆವು
ಹಲುಬಿದೆವು ಮುಂದಿರುವ ಸುಖ ಸುಖಿಸದೆ!

[ಈಗ ದಯಮಾಡಿ ಮತ್ತೊಮ್ಮೆ ಕವನ ಓದಿಕೊಳ್ಳಿ :]

http://badari-poems.blogspot.com/2011/12/blog-post.html

ತಣ್ಣನೆ ಅರಮನೆ ಗುಡುಗು
ಈಚಲಿಗೋ ಅಕಾಲ ರೆಕ್ಕೆ!

ಬಿಟ್ಟೇ ಬಿಟ್ಟೀದ್ದೀವಿ ನಮ್ಮೊಳಗ
ಖರಾಬು ಬಂಜರು ಭೂಮಿ
ಉಳುಮೆ ಕಾಣದ ಚಂದ್ರಮೈ,
ಅನ್ನ ಬೆಳೆಯುವ ಗಿಲೀಟೇಕೆ
ಇಲ್ಲಿ ಪ್ರಾಪ್ತಿಯೇ ಕುಂಟೆ
ಮುಳುಗೆದ್ದರೆ ನೀರೇ ಬರಿದು

ಬರಮಪ್ಪನೂ ಸಮಯಗೇಡಿ
ಮಹಾನ್ ಲೇಖಕನವನೇ?
ತೀಟೆ ಶಾಸ್ತ್ರದ ಒಕ್ಕಣೆ
ಬಗ್ಗಿಸಿ ಬರೆದು ಹುಟ್ಟಿಸಿದರಾಯ್ತೇ
ನಮ್ಮ ಮಂಡಿ ಚಿಪ್ಪಿನ ಮೇಲೆ
ಕಾಟಾಚರದ ಹಣೆ ಬರಹ!

ಹೊರಗೆ ಮುಸುಗುವೀರರು
ಕತ್ತಿ ನೂರುವ ಸದ್ಧಿಗಂಜಿ
ಬಿಲದಾಳ ಬಕ್ಕಾಬಾರಲು,
ಪರಾಕ

9 comments:

Sahana Rao said...

BahaLane channagide..

Banavasi Somashekhar. said...

ಸೊಗಸಾಗಿದೆ ಕವನ.ಅರ್ಥೈಸಲು ಓಂದಿಪ್ಪತ್ತು ಭಾರಿಯಾದರೂ ವಾಚಿಸಬೇಕಾಗುವುದು.ನವೀನ ಪದ ಪ್ರಯೋಗಗಳಲ್ಲಿ ಸಿದ್ಧಹಸ್ತರಾದ ತಾವು ಕವಿತೆಗಳಿಗೆ ಸುಂದರ ಅರ್ಥಪೂರ್ಣ ಪ್ರತಿಮೆಯೊದಗಿಸಿ ಜೀವ ನೀಡುತ್ತೀರಿ.ಕವಿತೆ ತುಂಬಾ ಚನ್ನಾಗಿದೆ.

Subrahmanya Hegde said...

nice work, great work, as banavasi somashekar pointed out, need to read few times to understand! keep writing, sir :)

ರವಿ ಮುರ್ನಾಡು said...

ಕಾರ್ಮಿಕ ವರ್ಗ ಅಂದಾಗ, ಅದರ ಬಗೆಗಿನ ಭಾವವೇ ಅಂತಹದ್ದು. ಕೆಲವೊಮ್ಮೆ ತಿನ್ನು ಗಂಜಿ ತಟ್ಟೆಯಲ್ಲಿ ನೊಣಗಳು ಎಂಜಲು ನೆಕ್ಕುವುದನ್ನು ಅನುಭವಕ್ಕೆ ಸಿಕ್ಕಿದೆ.ಹಾಕಿದ ಗಂಜಿಯೂ ತಟ್ಟೆಯೊಂದಿಗೆ ನೆಲದ ಹೊಟ್ಟೆ ಸೇರುವ ಭಾವವೂ ಉಂಟು. ಒಟ್ಟಾರೆ ತೀಟೆ ಶಾಸ್ತ್ರಕ್ಕೆ ಹರಿದ ಅಂಗಿ-ರವಕೆಗಳು ಜೋಪಡಿ ಮನೆಯಲ್ಲಿ ಬಿಸಿಲು- ಮಳೆಗೆ ಆಧಾರವಾಗುತ್ತವೆ. ನಿಮ್ಮ ಕವಿತೆ ಅಲ್ಲಿಯೇ ಅರ್ಥವನ್ನು ಹಿಡಿದು ಕುಳಿತುಬಿಟ್ಟಿದೆ ಮಾನ್ಯ ಭದ್ರಿನಾಥ್‍ ಸರ‍್.ಹೌದು ಅರ್ಥವಾಗಲಾರದು ಸಾಲುಗಳು.ಮನುಷ್ಯ ಬದುಕುಗಳು ಹಾಗೇ ಅರ್ಥವೇ ಆಗುವುದಿಲ್ಲ. ನಿಮ್ಮ ಕವಿತೆಯ ಹಾಗೇ. ಚೆನ್ನಾಗಿದೆ.

prathap.brahmavar said...

ನಿಮ್ಮ ಕವನಕ್ಕೆ ಪ್ರತಿಕ್ರಿಯಿಸುವಷ್ಟು ಸಮರ್ಥ ನಾನಲ್ಲಾ... :-) ದಬ್ಬಾಳಿಕೆಯ ವಿರುದ್ಧ , ದಗಲ್ ಬಾಜಿಗಳ ವಿರುದ್ಧ.. ಅಸಹಾಯಕತೆಯನ್ನ ತಮ್ಮ ದಾರಿಯ ಮೆಟ್ಟಿಲನ್ನಾಗಿಸಿಕೊಳ್ಳುವವರ ವಿರುದ್ಧ.. ತಿರುಗಿ ಬೀಳುವ, ಪ್ರತಿಭಟಿಸುವ ಬೆಂಕಿಯ ಕಿಡಿಯೊಂದನ ಕಾಣ್ತಾ ಇದೀನಿ ಅಷ್ಟೆ.. ಧನ್ಯವಾದಗಳು.. ಅಭಿನಂದನೆಗಳು..

|| ಪ್ರಶಾಂತ್ ಖಟಾವಕರ್ || *Prashanth P Khatavakar* said...

ಹೆಚ್ಚಾಗಿ ನಿಮ್ಮ ಕವನಗಳ ಬ್ಲಾಗ್ ನೋಡುತ್ತಿದ್ದೆವು.. ಇಂದು ಬ್ಲಾಗ್`ಗಳಲ್ಲಿ ಕೆಲವು ಬದಲಾವಣೆ ಮಾಡುವ ಸಮಯದಲ್ಲಿ ಯಾವುದೋ ಒಂದು ಲೇಖನದ ನೆನಪಿನಲ್ಲಿ ನಿಮ್ಮ ಈ ನೋಟ್`ಬುಕ್ ನೆನಪಾಗಿ.. ಬಂದು ನೋಡಿದೆವು.. ಅದೇಕೋ ಏನೋ ಸುಮ್ಮನೆ ನೋಡುತ್ತಾ ನೋಡುತ್ತಾ ಈ ಜೀ ಹುಜೂರು ಕಂಡಿತು.. ನೋಡಿದರೆ ನಿಮ್ಮ ಭಾವನೆಗಳ ಒಳಾರ್ಥ ಮತ್ತು ಕವಿತೆಯ ಲೋಕದಲ್ಲಿ ಒಂದು ಸುತ್ತಾಟ.. ಬಲು ಸುಂದರ ಅನುಭವ.. ಕವನ ಓದಿದಾಗ ನಮ್ಮ ಅನಿಸಿಕೆಯಲ್ಲಿ ಅನೇಕ ವಿವಿಧತೆ ಆದರೂ ನಗುಮನಸ್ಸಿನಿಂದ ಸ್ವೀಕರಿಸಿರುವಿರಿ.. ನಿಮಗೆ ನಮ್ಮ ನಮನಗಳು.. ಮತ್ತು ತಿಳಿದ ಮೇಲೆ ಭಾವಾರ್ಥ ನಿಮ್ಮ ಆಲೋಚನೆಯಲ್ಲಿ ಇರುವ ಆ ಕಾರ್ಯಾಲಯಗಳು , ಅದರ ಯಜಮಾನರು , ಕೆಲಸಗಾರರು , ಒಟ್ಟಾರೆ ಚಿತ್ರಣ ಸಿಕ್ಕಿದೆ.. ಈಗ ಮತ್ತೆ ಕವನ ಓದಿದಾಗ ಮತ್ತೆ ಕೆಲವು ಭಾವನೆಗಳು ಹೊಸ ವಿಚಾರಗಳು.. ಸತ್ಯವಾದ ಮಾತು ಎಂದರೆ ನಿಮ್ಮ ಕವನಗಳಲ್ಲಿ ಅದೇನೋ ಜಾದೂ ಇದೆ.. ನಿಮ್ಮ ಪದ ಪ್ರಯೋಗಗಳ ಕಂಡು ಒಂದು ಬಿರುದು ನಿಮಗಿಲ್ಲಿ.. "ಕವನ ಗಾರುಡಿಗ" ಎಂದರೆ ತಪ್ಪಿಲ್ಲ.. ಎಲ್ಲರೂ ಒಪ್ಪುವರು.. ನಿಮಗೆ ನಮ್ಮ ಮನಸ್ಪೂರ್ವಕ ಧನ್ಯವಾದಗಳು.. :)

sunaath said...

ಬದರಿನಾಥರೆ,
ಒಡಲಾಳದ ಒಂದು ಆಕ್ರೋಶವು ಹೇಗೆ ಕವಿತೆಯಾಗಬಲ್ಲದು ಎನ್ನುವದನ್ನು ಅರಿಯಲು ನಿಮ್ಮ ಈ ಕವನವನ್ನು ಓದಬೇಕು. ಮೇಲಿನ ಟಿಪ್ಪಣಿ ಹಾಗು ಕೆಳಗಿನ ಕವನ ಇವುಗಳನ್ನು ಜೊತೆಯಾಗಿ ಓದಿದಾಗ ಈ ಮಾತಿನ ಅರ್ಥವಾಗುತ್ತದೆ. ಒಂದು ಉತ್ತಮ, ಹೊಸ ಪ್ರಯತ್ನಕ್ಕೆ ಅಭಿನಂದನೆಗಳು.

Gold13 said...

ಚೆನ್ನಾಗಿದೆ ಸರ್.
ನಿಮ್ಮ ಪದಗಳ ಬಯಕೆ ಅಷ್ಟೇ ಪರಿಣಾಮಕಾರಿ
ಬರೆಯುತ್ತಿರಿ
ಸ್ವರ್ಣ

ಸೀತಾರಾಮ. ಕೆ. / SITARAM.K said...

adbhut!!!!