Saturday, July 7, 2012

ಅಲಾ ಬೆಂಗಳೂರೇ...


 
ನನ್ನ ಬೆಂಗಳೂರು, ಮೊದಲಿಂದಲೂ ಅರ್ಥ ಮಾಡಿಕೊಳ್ಳುವ ಮನದೆನ್ನೆಯಂತೆ ಅಪ್ಪಿ ಮುದಗೊಳಿಸಿದರೇ, ಕೆಲವೊಮ್ಮೆ ಅರ್ಥ ಮಾಡಿಕೊಳ್ಳದೆ ದೂರವಾದ ಗೆಳತಿಯಂತೆ ಕಕ್ಕಾಬಿಕ್ಕಿಯಾಗಿಸುತ್ತಾಳೆ!

  • ನನ್ನ ತಾಯಿ ನನ್ನ ಮನೆ ರಸ್ತೆಯಲ್ಲಿ ಬೆಳಿಗ್ಗೆ ೮ ಗಂಟೆ ಮೇಲೆ ವಾಕಿಂಗ್ ಹೋಗಲು ಆಗಲ್ಲ ಮಗ, ಮೈ ಮೇಲೇ ಕಾರು ಲಾರಿಗಳು ಬರ್ತವೆ ಅಂದಾಗ...
  • ಅತಿ ಮಳೆ ಹುಯ್ದು ನಮ್ಮ ತಗ್ಗು ಪ್ರದೇಶಗಳೆಲ್ಲಾ ಜಲಾವೃತವಾದಾಗ, ಕಾಪಾಡುವ ಗಾಳಿ ಆಂಜನೇಯನ ದೇವಸ್ಥಾನಕ್ಕೂ ನೀರು ನುಗ್ಗಿ, ಪರಮಾತ್ಮ ನಿನಗ್ಯಾರಪ್ಪಾ ಕಾಪಾಡ್ತಾರೆ ಅನಿಸಿದಾಗ...
  • ಹಾದಿ ಬದಿ ಧುತ್ತೆಂದು ಯಾವುದೋ ಭಿಕ್ಷುಕಿ ಎಳೇ ಕಂದಮ್ಮನನ್ನು ಹಳೇ ಸೀರೆಯಲಿ ಸುತ್ತಿಕೊಂಡು ಕೈ ಚಾಚಿದಾಗ..
  • ಒಳ್ಳೆ ಓಡುವ ಕುದುರೆಯಂತಹವರು ಥಟ್ ಅಂತ ನೌಕರಿ ಕಳೆದುಕೊಂಡಾಗ ಪರಿಚಿತರೆಲ್ಲ ಅಪರಿಚಿರು ಅನಿಸುವಾಗ...
  • ನಟ್ಟ ನಡು ರಾತ್ರಿಯಲಿ ಬಸ್ಸೇ ಬರದ ಬಸ್ ಸ್ಟಾಪಿನಲ್ಲಿ, ಕರೆದ ಕಡೆ ಬಾರದ ಆಟೋ ಬಂಧುಗಳನ್ನು ಶಪಿಸುತ್ತಾ ನಿಂತಾಗ, ಅಲ್ಲೇಲ್ಲೋ ಹೊಯ್ಸಳ ಗಾಡಿಯ ಸೈರನ್ ಕೇಳಿದಾಗ...
  • ಸರಗಳ್ಳರ ಹಾವಳಿಗೆ ಬೇಸತ್ತು ಪೊಲೀಸರು ಬೆಳಿಗ್ಗೆಯೇ ಚೀತಾ - ಹೊಯ್ಸಳಾಗಳಲ್ಲಿ ಬೀಟ್ ಆರಂಭಿಸಿದಾಗಲಿಂದ, ನನ್ನ ಪಾರ್ಕಿನಲ್ಲಿ ವ್ಯಾಯಾಮ ಮಾಡುವಾಗ ಬಲಗಡೆ ಚೀತಾ ಕಾಣಿಸಿ, ಎಡಗಡೆ ಹೊಯ್ಸಳ ಕಾಣಿಸಿ, ನಗರ ಮೊದಲಷ್ಟು ಸುರಕ್ಷಿತ ಅಲ್ಲ ಅನಿಸತೊಡಗಿದಾಗ...
  • ಲಾಲ್ ಬಾಗಿಗೆ ಪ್ರವೇಶ ಧನ ಅಂತ ಬೋರ್ಡ್ ನೇತು ಹಾಕಿದಾಗ...
  • ಚಿಕ್ಕ ಪುಟ್ಟ ಹೋಟೆಲ್ ಮುಚ್ಚಿ ಅದೇನೋ ಡೇ, ಅಲ್ಲೇನೋ ಹಟ್ ಅಂತ ಶುರುವಾದಾಗ...
  • ಮೆಟ್ರೋ ಕಾಮಗಾರಿ, ರಸ್ತೆ ಅಗೆತ, ಏಕ ಮುಖ ಸಂಚಾರ ಮತ್ತು ಭೋರಿಡುವ ವಾಹನಗಳ ನಡುವೆ, ನನ್ನ ಗಾಡಿ ಸ್ಟಾರ್ಟಿಂಗ್ ಟ್ರಬಲ್ ಕೊಟ್ಟಾಗ...
  • ಇಡೀ ದೇಶದಲ್ಲಿ ಪದೇ ಪದೇ ದುಬಾರಿ ನಗರ ಅಂತ ಘೋಷಿಸಿದಾಗ...
 ನನಗೆ ಬೆಂಗಳೂರು ಅಪರಿಚಿತ ಅನಿಸಲಾರಂಭಿಸುತ್ತದೆ!!!

16 comments:

Sudeepa ಸುದೀಪ said...

ನಿಜ ಆದರೂ ಒಪ್ಪಿಕೊಳ್ಳಲೆ ಬೇಕಾದ ಸತ್ಯ..

Dr.D.T.Krishna Murthy. said...

ಬದರಿ;ಬೆಂಗಳೂರು ಎಷ್ಟೇ ಪರಿಚಿತ ಎಂದುಕೊಂಡರೂ ಪ್ರತಿ ಸಲಒಂದು ಅಪರಿಚತ ಮುಖ ಎದುರಾಗುತ್ತದೆ!

Sunil R Agadi (Bhavapriya) said...

ಬೆಂಗಳೂರು ಬೆಳೆಯುತ್ತಿದೆ , ಎಷ್ಟು ಹೆಚ್ಚು ಹೆಚ್ಚು ಬೆಳೆಯುತ್ತದೋ ಅಷ್ಟು ನಮ್ಮದಲ್ಲ ಅನಿಸೋಕೆ ಶುರುವಾಗುತ್ತೆ. ಇದು ಬರಿ ಬೆಂಗಳೂರಿಗೆ ಸೀಮಿತವಲ್ಲ ಎಲ್ಲಾ ನಗರಗಳು ಇದೆ ಸ್ಥಿತಿಯಲ್ಲಿವೆ.

balasubramanya said...

ಬೆಂಗಳೂರೆಂಬ ಬೆಡಗಿಯ ಮಾಯಾಜಾಲದ ವರ್ಣನೆ ಸೂಪರ್ . ಹೌದು ಅವಳ ಮಹಿಮೆಯೇ ಅಂತದು ಯಾರಿಗೂ ಅರ್ಥ ವಾಗಲ್ಲಾ , ಅರ್ಥವಾಗೊದೂ ಇಲ್ಲಾ

Sheela Nayak said...

ಇದು ಬೆಂಗಳೂರಿನ ಮಾತ್ರ ಕತೆಯಲ್ಲ..ನನಗೂ ನನ್ನೂರು ಮಂಗಳೂರಿನ ಬಗ್ಗೆಯೂ ಹಾಗೆ ಅನ್ನಿಸತೊಡಗಿದೆ...

Anuradha said...

ನಮ್ಮೂರೇ ನಮಗೆ ಹೆದರಿಕೆ ಹುಟ್ಟಿಸುತ್ತದೆ ..ನಮ್ಮ ಬಡಾ ವಣೆಯೇ ಒಂದು ಪುಟ್ಟ ಊರಂತಾಗಿದೆ..ಆದರೂ ಎಷ್ಟಾದರೂ ನಮ್ಮ ಬೆಂಗಳೂರು ..!!

N said...

ಬದರಿಯಣ್ಣ, ಬೆಂಗಳೂರನ್ನು ಜಸ್ಟ್ ಪ್ರೀತಿಸಿ.. :))

ಪ್ರತಾಪ್ ಬ್ರಹ್ಮಾವರ್ said...

ಅವರೇನಾ ಇವರು ,ಅನಿಸೋದು , ಇಂತಹ ,ಸಮಯದಲ್ಲಿ ಅಲ್ವಾ ಬದರಿ ಸರ್ . ಸೂಕ್ಷ್ಮ ಸಂವೇದನೆ ಉಂಟು ಮಾಡುತ್ತೇ . ತುಂಬಾ ತುಂಬಾ ತುಂಬಾ ಇಷ್ಟ ಆಯ್ತು ,

Suresh said...

ಪ್ರತಿದಿನ ನಮ್ಮ ಮನೆಯಿಂದ ಹೊರಬಿದ್ದಾಗ ಪರಿಚಿತ ಮುಖಗಳಿಗಿಂತ ಅಪರಿಚಿತ ಮುಖಗಳೇ ಕಂಡುಬರುವ ಬೆಂದಕಾಳೂರಿನ ಗತಿ ನಮ್ಮ ನಿಮ್ಮಲ್ಲಿ ಈ ರೀತಿಯ ತಳಮಳ ಉಂಟುಮಾಡುವುದು ಸಹಜ.

Srikanth Manjunath said...

ಹಳ್ಳಿ, ದಿಲ್ಲಿ, ಮತ್ತು ಹೈಕಳು..ಬೆಳೆಯುತ್ತ ಹೋದ ಹಾಗೆ..ವಿಸ್ತಾರವು, ಹರವು ಬೆಳೆಯುತ್ತ ಹೋಗುತ್ತದೆ..ಅಂಗೈನಂತೆ ಇದ್ದದ್ದು ನಮ್ಮ ವ್ಯಾಪ್ತಿಗೆ ನಿಲುಕದಷ್ಟು ಬೆಳೆದಾಗ ಅಪರಿಚಿತ ಭಾವನೆ ಕಾಡುವುದು ಸಹಜ...ಬೆಂದಕಾಳೂರು ಬೆಂಗಳೂರಾದ ಚಿತ್ರಣ ಚೆನ್ನಾಗಿದೆ..

shivu.k said...

ಬದರಿನಾಥ್ ಸರ್,
ನಿಮ್ಮ ಅನುಭವವೇ ನನಗೆ ನಿತ್ಯವೂ ಆಗುತ್ತದೆ. ನಿಮ್ಮ ಮಾತನ್ನು ಖಂಡಿತ ಒಪ್ಪಿಕೊಳ್ಳುತ್ತೇನೆ..

sunaath said...

ಬದರಿನಾಥರೆ,
ಮೂವತ್ತು ವರ್ಷಗಳಿಂದಲೂ, ಸರಕಾರಿ ಕಾರ್ಯಕ್ಕಾಗಿ, ಬೆಂಗಳೂರಿಗೆ ಆಗಾಗ್ಗೆ ಬರುತ್ತಿದ್ದೆ. ಆಗೆಷ್ಟು ಚಂದವಿತ್ತು ಈ ಊರು! ಇದೀಗ ಬೆಂಗಳೂರು concrete jungle ಹಾಗು ಜನಾರಣ್ಯವಾಗಿದೆ!

|| ಪ್ರಶಾಂತ್ ಖಟಾವಕರ್ || *Prashanth P Khatavakar* said...

ಕೆಲವು ಕಾರಣಗಳಿಗೆ ಬೆಂಗಳೂರು ಅಪರಿಚಿತ ಹೌದು ಸರ್.. ಹಾಗೆಯೇ ಹೊಸತನವನ್ನು ಸೃಷ್ಟಿ ಮಾಡುವ ಸ್ಥಳವೂ ಹೌದು .. :)
ಬೇರೆ ಕಡೆಗಳಲ್ಲೂ ಹೊಸತನವನ್ನು ಹುಟ್ಟುಹಾಕಬಹುದು.. ಆದರೆ ಇಲ್ಲಿ ಏನನ್ನೇ ಮಾಡಿದರೂ ಅದಕ್ಕೆ ತಕ್ಕ ಪರಿಣಾಮ ಕ್ಷಣ ಮಾತ್ರದಲ್ಲೇ ದೊರಕುವ ಜಾಗ.. & ಇನ್ನೂ ಕೆಲವೊಮ್ಮೆ ಅಪರಿಚಿತ ಅನ್ನಿಸಿದಾಗ ಬದುಕಿನಲ್ಲಿ ಹೊಸದನ್ನು ಕಂಡಂತೆ , ಏನೋ ತಿಳಿಯದ ವಿಷಯಗಳ ಪತ್ತೆ ಹಚ್ಚಿದಂತೆ , ಅಪರೂಪಕ್ಕೊಮೆ ಯಾವುದೋ ಒಂದು ನಿಮಿಷ ನಾವೇ ವಿಜ್ಞಾನಿಗಳು ಅನ್ನುವಂತೆ ಊಹೆಗಳನ್ನು ಮಾಡಲಾರಂಭಿಸುತ್ತೇವೆ.. ಹಾಗೆಯೇ ಜೊತೆಯಲ್ಲಿ ನಾವು ಹುಟ್ಟಿ ಬೆಳೆದ ನಮ್ಮೂರೇ ನಮಗೆ ಚೆಂದ ಎನ್ನುವಂತೆ ಕೆಲವೊಮ್ಮೆ ಅನಿಸುತ್ತದೆ.. ಅದಕ್ಕೆ ನಮ್ಮವರು ಮತ್ತು ನಮ್ಮ ಇಚ್ಚಾನುಸಾರ ಖುಷಿಯನ್ನು ಹೊಂದುವ ಘಟನೆಗಳು ಕಾರಣ ಆಗುತ್ತವೆ.. ಸರ್.. :)

prashasti said...

ಹೌದಲ್ವಾ ಬದರಿ ಸರ್..
ಪರಿವರ್ತನೆ ಜಗದ ನಿಯಮ. ನಾವು ಹುಟ್ಟಿ ಬೆಳೆದ, ನೌಕರಿಗಾಗಿ ಅರಸಿ ಬಂದು ನಗರ ವರ್ಷಗಳಲ್ಲಿ ನಮ್ಮದೇ ಅನಿಸೋಕೆ ಶುರು ಆಗಿರುತ್ತದೆ. ಆ ನಮ್ಮನಗರ ನಮಗೇ ಅರಿವಾಗದಷ್ಟು ವೇಗದಲ್ಲಿ ಬೆಳೆಯಲಾರಂಭಿಸಿದಾಗ ಈ ರೀತಿ ಅಪರಿಚಿತವಾಗಲು ಶುರುವಾಗುತ್ತಾ ಅನಿಸುತ್ತದೆ.

KalavathiMadhusudan said...

nimma maatu aksharasaha satya.kolache pradeshanu khaali illa.

Vinod Kumar Bangalore said...

ಈ ಕಮೆಂಟು 2015 ರದು... ಈಗಲೂ ಪರಿಸ್ಥಿತಿ....ಹಾಗೇ ಇದೆ.. ಮುಗಿಯದೇ ಇರುವ ಮೆಟ್ರೋ ಕಾಮಗಾರಿ, ಗಲೀಜು, ಹೊಂಡಗಳು etc etc