Sunday, April 22, 2012

ಶ್ರೀ. ರವಿ ಮೂರ್ನಾಡು ಅವರ ನನ್ನ ಬಗೆಗಿನ ಬ್ಲಾಗ್ ಬರಹ.

http://ravimurnad.blogspot.in/2012/04/blog-post_21.html


http://www.gulfkannadiga.com/news-64622.html



ನಾನು full tight, out of order. ಉಬ್ಬುಬ್ಬಿ ಹೋಗಿದ್ದೇನೆ.

ಪುಟ್ಟ ಮೀನಿನಂತಹ ಈ ಅಙ್ಞಾತ ಕವಿಗೆ ಇದು ಭಾರೀ ಬಹುಮಾನ. ಅಸಲು ನನ್ನ ನೀರೇ ಬಾವಿಯಗಲ, ಚಕ್ಕುಬಂದಿಯೂ ಕೂಗು ದೂರ! ತಿಳಿದದ್ದೇ ಅರೆ ಪಾವು. ನನ್ನ ಕವಿತೆಗಳೋ(!) ಸ್ವಗತಗಳು. ಖಾಸಗಿ ಅಳಲು.

ನನ್ನ ಕವಿತೆಗಳನ್ನು ಇಲ್ಲಿ ವಿಶ್ಲೇಷಿಸಿದ ರೀತಿ ತಕ್ಕುದಾಗಿದೆ. ಒಳ ಹೂರಣವು ನಿಮಗೆ ಸರಿಯಾಗಿಯೇ ಅರ್ಥವಾಗಿದೆ ಸಾರ್.

ಪದ್ಯ ಗರ್ಭಿಸುವಾಗ ಗೊಜಲು ಅಥವ ಕಠಿಣಾರ್ಥ ಅಂತ ಮೊದಲ ಓದಿಗೆ ಅನಿಸಿದರೂ, ಈ ಪದಾರ್ಥವಿಲ್ಲದೆ ಈ ಪಾಕಗಟ್ಟಲಾರದು ಎಂದೆಣಿಸಿ ಬರೆಯುತ್ತೇನೆ. ಸ್ವಲ್ಪ ಸ್ಥೂಲ ಕಾಯದ ಈ ಕವಿಯ ಕಾವ್ಯ ಕಬ್ಬಿಣದ ಕಡಲೆಯಾಗದಂತೆ ಆಶೀರ್ವದಿಸಿ.

ಧನ್ಯೋಸ್ಮಿ, ಸಮಕಾಲೀನ ಕಾವ್ಯೋತ್ತಮ ಶ್ರೀಯುತ ರವಿ ಮೂರ್ನಾಡು ಅವರು ತಮ್ಮ ಅತ್ಯುತ್ತಮ ಬ್ಲಾಗಿನಲ್ಲಿ ನನ್ನ ಪುಟ್ಟ ಈಜನ್ನು ಸರಿಯಾಗಿ ಗ್ರಹಿಸಿ, ತಿದ್ದಿ ಬರೆದದ್ದು ನನಗೆ ಮಾರ್ಗ ಸೂಚಿ ಮತ್ತು ದಿಕ್ಸೂಚಿ. ಅಭಾರಿ ರವಿ ಸಾರ್.
ತಮ್ಮ ಅಂತರಾಷ್ಟ್ರೀಯ ಜಾಲ ಪತ್ರಿಕೆಯಲ್ಲಿ ಪ್ರಕಟಿಸಿದ ಶ್ರೀಯುತ ರಾಮಚಂದ್ರ ಅವರಿಗೂ ಗಲ್ಫ ಕನ್ನಡಿಗಕ್ಕೂ ಕೃತಙ್ಞತೆಗಳು.

ಇಷ್ಟು ದೊಡ್ಡ ಅಭ್ಯಂಜನಕ್ಕೆ ನಾನು ಪ್ರಾಪ್ತನಾದದ್ದು ನನ್ನ ಪ್ರಯತ್ನಕ್ಕೆ ಸಂದ ಅತ್ಯುನ್ನತ ಪುರಸ್ಕಾರ.

Tuesday, April 3, 2012

ಸಂತೆಯಲಿ ಮನೆ ಮಾಡಿ...!!!





ಅಂದ ಹಾಗೆ, ಈ ನಡುವೆ ನನ್ನ ಮನೆ ಎಂಬುದು "ಸಂತೆಯಲ್ಲಿ ಮನೆಯ ಮಾಡಿ..." ಅನ್ನೋ ತರಹ ಆಗೋಗಿದೆ!


ತುಂಬಾ ಸುಸ್ತಾಗಿ ಮನೆಗೆ ರಾತ್ರಿ ಯಾವುದೋ ಹೊತ್ತಿನಲ್ಲಿ ಬಂದು, ನಾಲ್ಕು ತುತ್ತು ಶಾಸ್ತ್ರಕ್ಕೆ ಅಂತ ತಿಂದು ಇನ್ನೇನು ಮಲಗಬೇಕು ಅಂತ ಹಾಸಿಗೆಗೆಗೆ ಬಿದ್ದರೆ, ಹಿಂದಲ ಮನೆಯವರ ಮೈಕ್ ಸೆಟ್ ಶುರೂ.


ಆಂಧ್ರ ಕಡೆ ರೆಡ್ಡಿಗಳೂ ಅಂತ ಕಾಣುತ್ತೆ. ಅದೇನು ಕುರುಡು ಪ್ರೀತಿಯೋ ಕಾಣೆ! ಆಂಧ್ರಪ್ರದೇಶದ ಮಾಜೀ ಮುಖ್ಯ ಮಂತ್ರಿ ದಿವಂಗತ. ವೈ.ಎಸ್. ರಾಜಶೇಖರ ರೆಡ್ಡಿಯವರನ್ನು ಗುಣಗಾನ ಮಾಡುವ ಜಾನಪದ ಶೈಲಿಯ ಹಾಡನ್ನು ಜೋರಾಗಿ ಹಾಕಿಬಿಡುತ್ತಾರೆ. ಅಲ್ಲಿಗೆ ನನ್ನ ಎಡಗಿವಿ ಮಟಾಷ್!


ಇನ್ನು ಬಲಗಿವಿಗೆಗೆ ಯಾಕೆ ಪುರಸೊತ್ತೂ ಅಂತ ಆ ಕಡೆ ಮನೆಯ ಒರಿಸ್ಸಾ ಮುದುಕ ತಾನೇನು ಕಮ್ಮಿ ಅಂತ ಜೋರಾಗಿ ಟೀವಿ ಹಾಕುತ್ತಾನೆ. ಅಲ್ಲಿಗೆ ನನ್ನ ಎರಡೂ ಕಿವಿಗಳ ತಮಟೆಗಳು ಕಿತ್ತು ಊರಗಲವಾಗಿರುತ್ತವೆ.


ಮೊದಲೇ ಬೇಸಿಗೆ, ಜೊತೆಗೆ ಈ ತಾರಕ ಸ್ವರದ ಕಿರಿಕಿರಿ ನನ್ನ ನಿದ್ದೆ ಅಸ್ತಗತವಾಗಿ, ಬದುಕು ಹರಹರಾ ಎನ್ನುವಂತಾಗಿದೆ...


ನಡು ರಾತ್ರಿ ಯಾವಾಗಲೋ ಅವರಿಗೇ ಬೇಜಾರಾದಾಗ ಬ್ಯಾಂಡ್ ಸೆಟ್ ಬಂದ್ ಆದರೆ ನನಗೂ ಒಸೀ ನಿದ್ದೆ.


ಇನ್ನೂ ಬೆಳಗಿನ ಕಥೆ ಇನ್ನೂ ಘೋರ....


ನಾಲ್ಕು ಗಂಟೆ ಸುಮಾರಿಗೆ ಪಕ್ಕದ ಮನೆಯ ನಡು ವಯಸಿನ ಹೆಂಗಸಿಗೆ ಶಿರಡಿ ಸಾಯಿ ಬಾಬಾ ಅವರ ಮೇಲೆ ಭಕ್ತಿ ಉಕ್ಕಿ ಬಂದು, ಆಕೆ ಆಡಿಯೋ ಪ್ಲೈಯರ್ ಹಚ್ಚಿಟ್ಟು ಬಿಟ್ಟರೆಂದರೆ ಅಲ್ಲಿಗೆ ನನ್ನ ನಿದ್ರೆಗೆ ಫುಲ್ ಸ್ಟಾಪ್...


ಅಯ್ಯೋ ನನ್ನ ಮನೆ ಯಾಕೋ "ಸಂತೆಯಲಿ ಮನೆ ಮಾಡಿ....!!!!" ಅನ್ನೋ ತರಹ ಆಗಿದೆ ಸ್ವಾಮಿ.

(ಚಿತ್ರ ಕೃಪೆ : ಅಂತರ್ಜಾಲ)